ಕಾರ್ಕಳ ತಾಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ

ವಾಲ್ಮೀಕಿಯ ಬದುಕು ಮತ್ತು ಬರಹ ಸ್ಫೂರ್ತಿದಾಯಕ – ಮಂಜುನಾಥ ಹಿಲಿಯಾಣ

ಕಾರ್ಕಳ : ವಾಲ್ಮೀಕಿಯ ಬದುಕು ಮತ್ತು ಬರಹ ಸ್ಫೂರ್ತಿದಾಯಕ. ಬೇಡನ ಬಾಣಕ್ಕೆ ಸಂಗಾತಿಯನ್ನು ಕಳೆದುಕೊಂಡ ಹಕ್ಕಿಯ ಆರ್ತನಾದಕ್ಕೆ ವಾಲ್ಮೀಕಿ ನೊಂದ ಬಗೆ ಮುಂದೆ ರಾಮಾಯಣ ರಚನೆಗೆ ಪ್ರೇರಣೆಯಾಯಿತು ಎಂದು ಕಥೆಗಾರ, ಲೇಖಕ ಮಂಜುನಾಥ ಹಿಲಿಯಾಣ ಅಭಿಪ್ರಾಯಪಟ್ಟರು.

ಅವರು ಅ. 28 ರಂದು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು.

ವಾಲ್ಮೀಕಿ ರಾಮಾಯಣ ಶ್ರೇಷ್ಠ ಕಾವ್ಯ
ಎಲ್ಲಾ ಕಾಲದ‌ ಸಮಸ್ಯೆಗಳಿಗೆ ಉತ್ತರ ಕೊಡುವ ಕಾವ್ಯ ಶ್ರೇಷ್ಠವಾದುದು. ಅಂತಹ ಮಹಾನ್‌ ಕಾವ್ಯಗಳಲ್ಲಿ ಪ್ರಮುಖವಾದುದು ವಾಲ್ಮೀಕಿ ರಾಮಾಯಣ. ವಾಲ್ಮೀಕಿಯವರು ತಾನು ರಚಿಸಿದ ಕಾವ್ಯದಲ್ಲಿ ತಾನೇ ಪಾತ್ರವಾದ ಬಗೆ ವಿಶೇಷ. ಜೀವನ ಮೌಲ್ಯಗಳಿಂದ ದೂರ ಸರಿಯುತ್ತಿರುವ ಪ್ರಸ್ತುತ ಜಗತ್ತಿನಲ್ಲಿ ಯುವಜನತೆ ಮಾನವೀಯ ಮೌಲ್ಯಗಳನ್ನು ಒಳಗೊಂಡ‌ ವಾಲ್ಮೀಕಿ ರಾಮಾಯಣ ತಿಳಿಯುವುದು ಅವಶ್ಯ.

ಸನ್ಮಾನ
ಇದೇ ಸಂದರ್ಭ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ತಾಲೂಕಿನ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಅನಂತ ಶಂಕರ ಬಿ. ಮಾತನಾಡಿ, ಬೇಡ ಸಮುದಾಯದಲ್ಲಿ ಜನಿಸಿದ ವಾಲ್ಮೀಕಿ ಸಮಾಜದ ಜಂಜಾಟಗಳನ್ನು ತೊರೆದು ತನ್ನ ಆದರ್ಶ ಬದುಕಿನ ಮೂಲಕ ವಿಶ್ವಕ್ಕೆ ಮಾದರಿಯಾದವರು. ಅವರ ಜೀವನ ಎಂದಿಗೂ ಅನುಕರಣೀಯ ಎಂದರು.

ಪುರಸಭಾ ಮುಖ್ಯಾಧಿಕಾರಿ ರೂಪಾ‌ ಟಿ. ಶೆಟ್ಟಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿಟ್ಟೆ ವಿದ್ಯಾರ್ಥಿ ನಿಲಯದ ನಿಲಯಾಧಿಕಾರಿ ವಿನಾಯಕ ಬಾಳಿಗ ಸ್ವಾಗತಿಸಿದರು. ಚೇತನಾ ವಿಜಯ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕರು ಕುಮಾರ್ ನಾಯಕ್ ವಂದಿಸಿದರು. ಜಯಂತಿ ಸಹಕರಿಸಿದರು.





























































































error: Content is protected !!
Scroll to Top