ವಾಲ್ಮೀಕಿ ಮಹರ್ಷಿಯಾದ ಕಥೆ

ಇಂದು ವಾಲ್ಮೀಕಿ ಜಯಂತಿ

ಮಹರ್ಷಿ ವಾಲ್ಮೀಕಿ ಸನಾತನ ಧರ್ಮದ ಪ್ರಮುಖ ಋಷಿಗಳಲ್ಲಿ ಒಬ್ಬರು. ರಾಮನಿಗೆ ಸಮಕಾಲೀನರೆಂದು ಹೇಳಲಾಗಿದೆ. ರಾಮನನ್ನು ಹದಿನಾಲ್ಕು ವರ್ಷಗಳ ವನವಾಸದ ಸಮಯದಲ್ಲಿ ಭೇಟಿಯಾದರು ಅಲ್ಲದೆ ರಾಮನಿಂದ ಪರಿತ್ಯಕ್ತಳಾದ ಸೀತೆಗೆ ಆಶ್ರಯ ನೀಡಿದವರು. ಹೀಗೆ ಅನೇಕ ಕಾರಣಗಳಿಂದಾಗಿ ವಾಲ್ಮೀಕಿ ಹೆಸರುವಾಸಿಯಾಗಿದ್ದಾರೆ. ಇಂದು ಅವರ ಜನ್ಮದಿನ. ಅಶ್ವಿನ್ ತಿಂಗಳ ಹುಣ್ಣಿಮೆಯ ದಿನ ಮಹರ್ಷಿ ವಾಲ್ಮೀಕಿಯ ಜನ್ಮದಿನವೆಂದು ಆಚರಿಸಲಾಗುತ್ತಿದೆ. ಈ ಬಾರಿ ಈ ದಿನವು ಅಕ್ಟೋಬರ್ 28 ರಂದು ಬಂದಿದೆ.

ಹಿಂದೂ ಧರ್ಮದ ಮುಖ್ಯ ಮಹಾಕಾವ್ಯವಾದ ರಾಮಾಯಣವನ್ನು ಅವರು ರಚಿಸಿದ್ದಾರೆ. ಮಹರ್ಷಿ ವಾಲ್ಮಿಕಿಯ ಮೂಲ ಹೆಸರು ರತ್ನಾಕರ. ಅವರ ತಂದೆ ಭಗವಾನ್‌ ಬ್ರಹ್ಮನ ಮಾನಸ ಪುತ್ರ ಪ್ರಚೇತಾ.

ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗನಾದ್ದರಿಂದ ಅವರಿಗೆ ‘ಪ್ರಾಚೇತಸ’ ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತವನ್ನು ಸಂಸ್ಕೃತದಲ್ಲಿ ವಲ್ಮಿಕ ಎಂದು ಕರೆಯುತ್ತಾರೆ. ವಲ್ಮಿಕವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‘ವಾಲ್ಮೀಕಿ’ ಎಂಬ ಹೆಸರು ಬಂತಂತೆ. ನಾರದರ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗಿದೆ.

ಬಾಲ್ಯದಲ್ಲಿ ಮಹರ್ಷಿ ವಾಲ್ಮೀಕಿಯನ್ನು ಭೀಲಾನೀ ದ್ವಾರದಲ್ಲಿ ಅಪಹರಿಸಲಾಯಿತು. ಈ ಕಾರಣದಿಂದಾಗಿ ಅವರು “ಭೀಲ್‌” ಸಮಾಜದಲ್ಲಿ ಒಬ್ಬರಾಗಿ ಬೆಳೆದರು. ಭೀಲ್‌ ಕುಟುಂಬದ ಜನರು ಆ ಸಮಯದಲ್ಲಿ ಕಾಡಿನ ಜನರನ್ನು ಲೂಟಿ ಮಾಡುತ್ತಿದ್ದರು. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವನು ಬೆಳೆಯುವ ಪರಿಸರದ ಪ್ರಭಾವ ಬಹಳಷ್ಟಿರುತ್ತದೆ. ಅಂತೆಯೇ ಭೀಲ್‌ ಜನರ ವರ್ತನೆಯಿಂದ ಪ್ರಭಾವೀತರಾದ ವಾಲ್ಮೀಕಿ ಕೂಡ ಒಬ್ಬ ದರೋಡೆಕೋರನಾಗಿ ಬೆಳೆದು ದರೋಡೆ, ಲೂಟಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ವಾಲ್ಮೀಕಿ ಮಹರ್ಷಿ ಆದದ್ದು
ಒಮ್ಮೆ ದೇವರು ವಾಲ್ಮಿಕಿಯನ್ನು ಸರಿದಾರಿಗೆ ತಂದು ಕಾಡಿನ ಜನರನ್ನು ಆತನಿಂದ ರಕ್ಷಿಸಬೇಕೆಂದು ಯೋಚಿಸುತ್ತಿದ್ದರಂತೆ. ಹಾಗೇ ಒಂದು ಸಲ ನಾರದರು ಕಾಡಿನಲ್ಲಿ ಹಾದುಹೋಗುತ್ತಿದ್ದಾಗ ರತ್ನಾಕರ ಅವರನ್ನು ಹಿಡಿದು ಸೆರೆಯಲ್ಲಿಟ್ಟುಕೊಂಡನು. ಆಗ ನಾರದ ಮುನಿಗಳು ರತ್ನಾಕರನನ್ನು ಕುರಿತು ನೀವು ಮಾಡುತ್ತಿರುವುದು ಪಾಪದ ಕೃತ್ಯ, ನಿಮ್ಮ ಪಾಪದ ಪಾಲುದಾರಿಕೆಯಲ್ಲಿ ನಿಮ್ಮ ಕುಟುಂಬವೂ ಕೂಡ ಸೇರಿಕೊಳ್ಳುತ್ತದೆ. ಸಿಕ್ಕ ಸಿಕ್ಕವರನ್ನು ಸೆರೆಯಲ್ಲಿಟ್ಟು ಹಿಂಸಿಸುವ ಬದಲು ನಿಮ್ಮ ಕುಟುಂಬವನ್ನು ಒಮ್ಮೆ ಸೆರೆಯಲ್ಲಿಟ್ಟು ನೋಡಿ. ಅವರು ಸೆರೆವಾಸದಲ್ಲಿರಲು ಒಪ್ಪುತ್ತಾರೆಯೇ ನೋಡಿ ಎಂದು ಹೇಳಿದರಂತೆ. ಆಗ ರತ್ನಾಕರ ಕುಟುಂಬದ ಸದಸ್ಯರಲ್ಲಿ ನನ್ನ ಪಾಪದಲ್ಲಿ ನೀವು ಪಾಲುದಾರರಾಗುವಿರಾ ಎಂದು ಕೇಳಿದಾಗ, ಎಲ್ಲರೂ ಪಾಪದಲ್ಲಿ ಪಾಲು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಆಗ ರತ್ನಾಕರನಿಗೆ ಅರಿವು ಮೂಡುತ್ತದೆ. ಈ ಘಟನೆ ರತ್ನಾಕರನಿಗೆ ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ಕಾರಣವಾಗುತ್ತದೆ. ಆಗ ರತ್ನಾಕರ ನಾರದರ ಬಳಿ ತಾನು ಮಾಡಿದ ಪಾಪಕ್ಕೆ ಪರಿಹಾರ ಕೇಳುತ್ತಾನೆ. ನಾರದರು ಅವರಿಗೆ “ರಾಮ” ಎಂಬ ಮಂತ್ರವನ್ನು ಪಠಿಸುವಂತೆ ಸಲಹೆಯನ್ನು ನೀಡುತ್ತಾರೆ. ನಾರದರ ಮಾತಿನಿಂದ ಪ್ರಭಾವಿತನರಾದ ರತ್ನಾಕರ ತಪಸ್ಸಿಗೆ ಕುಳಿತುಕೊಂಡು ರಾಮ ನಾಮವನ್ನು ಜಪಿಸಲು ಆರಂಭಿಸಿದರು. ಅಂದಿನಿಂದ ರತ್ನಾಕರ ಎನ್ನುವ ಕ್ರೂರಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿದರು.

ರಾಮಾಯಣದ ರಚನೆ
ವಾಲ್ಮೀಕಿ ಮಹರ್ಷಿಗಳು ತಮಸಾ ನದಿ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು
ವಿಚಲಿತರಾಗಿ ಪ್ರೀತಿಯಲ್ಲಿ ಭಾಗಿಯಾದ ಹಕ್ಕಿಯನ್ನು ಕೊಂದ ದುಷ್ಟ ಬೇಟೆಗಾರನಿಗೆ ಎಂದಿಗೂ ಪ್ರೀತಿ ಸಿಗದಿರಲಿ ಎಂದು ಶಾಪವನ್ನು ನೀಡುತ್ತಾರೆ. ಶಪಿಸಿದ ನಂತರ, ಮಹರ್ಷಿಗಳಿಗೆ ತನ್ನ ಬಾಯಿಂದ ಯಾವ ಪದಗಳು ಹೊರಬಂದವು ಎನ್ನುವುದೇ ಅರಿವಿಗೆ ಬರಲಿಲ್ಲ. “ನಾನು ಯಾವ ಪದದಿಂದ ಭೇಟೆಗಾರನನ್ನು ಶಪಿಸಿದೆ “ಎಂದು ಚಿಂತಿಸುತ್ತಾ ಕುಳಿತಿರುವಾಗ ನಾರದ ಮುನಿಗಳು ಪ್ರತ್ಯಕ್ಷರಾಗಿ ಅವರ ಚಿಂತೆಯನ್ನು ದೂರಾಗಿಸಿದರು. ಇದು ನಿಮ್ಮ ಮೊದಲ ಪದ್ಯ, ಈಗ ನೀವು ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವಿರಿ ಎಂದು ನಾರದರು ಹೇಳಿದರು. ಇದರ ನಂತರ ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ಬರೆದರು.

ಮಹರ್ಷಿ ವಾಲ್ಮೀಕಿ ಸಂಸ್ಕೃತದ ಮಹಾನ್ ಪ್ರತಿಪಾದಕರಾಗಿದ್ದರು. ಅವರು ಬರೆದ ರಾಮಾಯಣ ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ ಮತ್ತು ಇದು ರಾಮನ ಸಂಪೂರ್ಣ ಜೀವನವನ್ನು ಬಿತ್ತರಿಸಿದೆ.

ಇಂತಹ ಆದರ್ಶ ಪುರುಷನ ಜನ್ಮ ದಿನವನ್ನು ದೇಶದಾದ್ಯಂತ ಗೌರವ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಹರ್ಷಿ ವಾಲ್ಮೀಕಿಯವರು ರಚಿಸಿದ ಪವಿತ್ರ ಗ್ರಂಥ ರಾಮಾಯಣದಲ್ಲಿ ಪ್ರೀತಿ, ತ್ಯಾಗ, ತಪಸ್ಸು ಮತ್ತು ಖ್ಯಾತಿಯ ಭಾವನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಇಂದು ಅನೇಕ ಕಾರ್ಯಕ್ರಮಗಳ ಮೂಲಕ ಮಹರ್ಷಿ ವಾಲ್ಮೀಕಿ ಅವರಿಗೆ ಗೌರವವನ್ನು ವ್ಯಕ್ತಪಡಿಸುತ್ತಾರೆ. ವಾಲ್ಮೀಕಿಯವರ ಜೀವನವನ್ನು ನೆನಪಿಸಿಕೊಳ್ಳಲಾಗುತ್ತದೆ. ಇದು ಬದುಕಿನ ಪರಿವರ್ತನೆಗೆ ಸ್ಫೂರ್ತಿಯಾಗಿದೆ.

ಬರಹ : ಡಾ. ಸುಮತಿ ಪಿ., ಉಪನ್ಯಾಸಕರು



































































































error: Content is protected !!
Scroll to Top