3,000 ದಾಟಿದ ಸಾವಿನ ಸಂಖ್ಯೆ; ಸಂಘರ್ಷ ತೀವ್ರ
ಟೆಲ್ ಅವೀವ್ : ಹಮಾಸ್ ಉಗ್ರರು 40ಕ್ಕೂ ಹೆಚ್ಚು ಮಕ್ಕಳ ಶಿರಚ್ಛೇದ ಮಾಡಿದ್ದಾರೆ, ಹಲವಾರು ಒತ್ತೆಯಾಳುಗಳನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳು ಅಂತರಾಷ್ಟ್ರೀಯ ಪತ್ರಕರ್ತರನ್ನು ಇಸ್ರೇಲಿ ಗಡಿ ಪಟ್ಟಣವಾದ ಕ್ಫಾರ್‌ಅಜಾಕ್ಕೆ ಕರೆದೊಯ್ದು ಹಮಾಸ್ ಉಗ್ರರ ಕ್ರೌರ್ಯದ ಪ್ರತ್ಯಕ್ಷದರ್ಶನ ಮಾಡಿಸಿದ್ದಾರೆ. ಇದು ಹಮಾಸ್ ಉಗ್ರರು ಗಾಜಾಪಟ್ಟಿಯಿಂದ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ.
ಮನೆಯಲ್ಲಿದ್ದ ಮಕ್ಕಳು, ತಂದೆ-ತಾಯಂದಿರನ್ನು ಅವರ ಕೋಣೆಗಳಲ್ಲಿ ಕೊಲ್ಲಲಾಗಿದೆ. ಇದು ಯುದ್ಧವಲ್ಲ, ಇದೊಂದು ಹತ್ಯಾಕಾಂಡ” ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಹಮಾಸ್ ಭಯೋತ್ಪಾದಕರು ವಶಪಡಿಸಿಕೊಂಡ ಪ್ರದೇಶಗಳ ನಿಯಂತ್ರಣವನ್ನು ಮರಳಿ ಪಡೆದ ನಂತರ ಬಲಿಪಶುಗಳ ಮೃತ ದೇಹಗಳನ್ನು ತೆಗೆದುಹಾಕುವ ಕಾರ್ಯಾಚರಣೆಯಲ್ಲಿ ಇಸ್ರೇಲಿ ಸೈನಿಕರು ನಿರತರಾಗಿರುವಾಗ ಹಮಾಸ್ ಭಯೋತ್ಪಾದಕರು ಜೀವಂತವಾಗಿ ಸುಟ್ಟ ಒತ್ತೆಯಾಳುಗಳ ದೇಹಗಳ ಕೆಲವು ಭಯಾನಕ ಚಿತ್ರಗಳು ಸಹ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.
ಹಮಾಸ್ ಭಯೋತ್ಪಾದಕರು ಇಸ್ರೇಲಿ ಸಂಗೀತೋತ್ಸವವನ್ನು ಹತ್ಯಾಕಾಂಡವಾಗಿ ಪರಿವರ್ತಿಸಿದ್ದು, ಅಲ್ಲಿ 260ಕ್ಕೂ ಹೆಚ್ಚು ಮೃತದೇಹಗಳ ಸಿಕ್ಕಿದ್ದವು. ಡಜನ್‌ಗಟ್ಟಲೆ ಜನರನ್ನು ಒತ್ತೆಯಾಳುಗಳಾಗಿ ಗಾಜಾಕ್ಕೆ ಕರೆದೊಯ್ದಿದ್ದಾರೆ.
ಹಮಾಸ್ ಉಗ್ರರು ಮುಗ್ಧ ಇಸ್ರೇಲಿ ನಾಗರಿಕರನ್ನು ಹೇಗೆ ಗುರಿಯಾಗಿಸಿಕೊಂಡು ಮೆರೆದ ಕ್ರೌರ್ಯವನ್ನು ಕೆಲವು ವೀಡಿಯೊಗಳು ಬಹಿರಂಗಪಡಿಸುತ್ತವೆ.ಇಸ್ರೇಲ್‌ನ ಐ24 ನ್ಯೂಸ್ ವರದಿಯ ಪ್ರಕಾರ ಇಸ್ರೇಲ್‌ನಲ್ಲಿ ಹಮಾಸ್ ಉಗ್ರರು ನಡೆಸಿರುವ ನರಮೇಧ ಊಹೆಗೂ ನಿಲುಕದ್ದಾಗಿದೆ. ಕೆಲವೆಡೆ ಇಡೀ ಕುಟುಂಬವನ್ನೇ ಹತ್ಯೆ ಮಾಡಲಾಗಿದೆ. ಸಂಘರ್ಷದಲ್ಲಿ ಈಗಾಗಲೇ 3000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.


































