ಅತ್ತಿಬೆಲೆ ಘಟನೆ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸಿದ ಸರಕಾರ
ಬೆಂಗಳೂರು: ಬೆಂಗಳೂರು ಸಮೀಪ ಅತ್ತಿಬೆಲೆಯಲ್ಲಿ ಪಟಾಕಿಗೆ ಬೆಂಕಿಹತ್ತಿಕೊಂಡು ಸಿಡಿದು 14 ಜನ ಮೃತಟ್ಟಿರುವ ಘಟನೆಯನ್ನು ನೆಪವಾಗಿಟ್ಟುಕೊಂಡು ಸರಕಾರ ಹಬ್ಬ ಮತ್ತಿತರ ಸಮಾರಂಭಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಇದು ಸದ್ಯದಲ್ಲೇ ಬರುವ ದೀಪಾವಳಿ ಹಬ್ಬಕ್ಕೂ ಅನ್ವಯಿಸುವುದರಿಂದ ಜನರಿಗೆ ನಿರಾಶೆಯಾಗಿದೆ. ಹಬ್ಬ, ಮದುವೆ ಸಮಾರಂಭ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದ ಮುಖ್ಯಮಂತ್ರಿ, ದೀಪಾವಳಿ ಸಮೀಪವೇ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಪಟಾಕಿ ಸಿಡಿಸುವಾಗ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದೆಲ್ಲೆಡೆ ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋದಾಮುಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಅವಘಡಗಳನ್ನು ತಪ್ಪಿಸಲು ಇನ್ನಷ್ಟು ಬಿಗಿ ನಿಯಮ ತರಲಾಗಿದ್ದು, ಪಟಾಕಿ ಮಾರಾಟಕ್ಕೆ 5 ವರ್ಷಕ್ಕೆ ಇರುವ ಲೈಸೆನ್ಸನ್ನು ಇನ್ಮುಂದೆ ಪ್ರತಿ ವರ್ಷ ಹೊಸದಾಗಿ ನವೀಕರಿಸಬೇಕಾಗಿದೆ. ಪಟಾಕಿ ಗೋದಾಮುಗಳ ಮುಂಭಾಗದಲ್ಲಿ ವಿಶಾಲವಾದ ಖಾಲಿ ಜಾಗ ಇರುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.


































