ಕಾರ್ಕಳ : ಬಾಕಿಯಿರುವ ತುಟ್ಟಿಭತ್ಯೆ ಹಾಗೂ ಕನಿಷ್ಠ ಕೂಲಿ ನೀಡಲು ಒತ್ತಾಯಿಸಿ ಸೆ. 27 ರಂದು ಕರಿಯಕಲ್ಲು ಟೆಲಿಫೋನ್ ಬೀಡಿ ಕಂಪನಿಯ ಮುಂದೆ ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೀಡಿ ಕಾರ್ಮಿಕರ ಪ್ರತಿಭಟನೆಯಿಂದಾಗಿ ಉಚ್ಛ ನ್ಯಾಯಾಲಯವು 2015ರಿಂದ ಪ್ರತಿ ಸಾವಿರ ಬೀಡಿಗೆ ರೂ. 12.75 ರಂತೆ ತುಟ್ಟಿಭತ್ಯೆಯನ್ನು ನೀಡುವಂತೆ ಆದೇಶ ನೀಡಿದೆ. 2018ರಲ್ಲಿ ಕರ್ನಾಟಕ ರಾಜ್ಯ ಸರಕಾರ ಬೀಡಿ ಕಾರ್ಮಿಕರ ಕನಿಷ್ಠ ಕೂಲಿಯನ್ನು ಪರಿಷ್ಕರಿಸಲು 5(1) ಎ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಒಂದು ಸಾವಿರ ಬೀಡಿಗೆ 210 ರಂತೆ ಕನಿಷ್ಠ ವೇತನ ನೀಡಬೇಕು ಎಂದು ಸರ್ವಾನುಮತದಿಂದ ತೀರ್ಮಾನಿಸಿತ್ತು. ಆದರೆ ಬೀಡಿ ಮಾಲಕರು ಇದನ್ನು ಜಾರಿಗೊಳಿಸುವ ಬದಲು ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಒಕ್ಕೂಟ (ಸಿಐಟಿಯು)ವು ಬೀಡಿ ಕಾರ್ಮಿಕರಿಗೆ ನ್ಯಾಯೋಚಿತವಾಗಿ ನೀಡಬೇಕಾದ 2015-2018 ರವರೆಗೆ ಮೂರು ವರ್ಷಗಳ ಬಾಕಿ ಇರುವ ತುಟ್ಟಿಭತ್ಯೆ ಮತ್ತು 2018 ರಿಂದ ಬಾಕಿ ಇರುವ ಕನಿಷ್ಠ ಕೂಲಿಯನ್ನು ನೀಡಬೇಕೆಂದು ಒತ್ತಾಯಿಸಿ ಕಾರ್ಮಿಕರು ಇಂದು ಹೋರಾಟ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇಯರ, ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಂದರ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ತಾಲ್ಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಕೋಶಾಧಿಕಾರಿ ಸುಮತಿ ಹಾಗೂ ಸಿಐಟಿಯು ಮುಖಂಡ ಮೋಹನ್ ಉಪಸ್ಥಿತರಿದ್ದರು.
































