ಯೋಧರನ್ನು ರಕ್ಷಿಸಲು ಪ್ರಾಣ ಬಲಿದಾನ ಮಾಡಿದ ಕೆಂಟ್
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ಶ್ವಾನ ಮೃತಪಟ್ಟಿದೆ. ಯೋಧನನ್ನು ರಕ್ಷಿಸುವ ವೇಳೆ ಕೆಂಟ್ ಎಂಬ ಆರು ವರ್ಷದ ಭಾರತೀಯ ಸೇನೆಯ ಶ್ವಾನಕ್ಕೆ ಗುಂಡು ತಗಲಿದೆ. ಸೈನಿಕರೊಂದಿಗೆ ತೆರಳುತ್ತಿದ್ದ ಶ್ವಾನ ಭಾರಿ ಗುಂಡಿನ ದಾಳಿಯ ನಡುವೆ ಸಿಕ್ಕಿಬಿದ್ದಿತ್ತು. ನಾರ್ಲಾ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಈ ಎನ್‌ಕೌಂಟರ್ ನಡೆದಿದೆ.
ಕೆಂಟ್ 21ನೇ ಆರ್ಮಿ ಡಾಗ್ ಯುನಿಟ್‌ನ ಹೆಣ್ಣು ಲ್ಯಾಬ್ರಡಾರ್ ತಳಿಯ ನಾಯಿಯಾಗಿದ್ದು, ತನ್ನ ಹ್ಯಾಂಡ್ಲರ್ ಅನ್ನು ಉಳಿಸಲು ಪ್ರಾಣ ತ್ಯಾಗ ಮಾಡಿದೆ. ಕೆಂಟ್ ಕೊನೆಯುಸಿರೆಳೆಯುವ ಮುನ್ನ ಉಗ್ರರ ಜಾಡು ಹಿಡಿದು ಸೈನಿಕರನ್ನು ಅತ್ತ ಕರೆದೊಯ್ಯುತ್ತಿತ್ತು. ಸೇನಾ ಶ್ವಾನ ಕೆಂಟ್ ಆಪರೇಷನ್ ಸುಜಲಿಗಾಲದಲ್ಲಿ ಮುಂಚೂಣಿಯಲ್ಲಿತ್ತು.
ರಜೌರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಶಂಕಿತ ಪಾಕಿಸ್ಥಾನಿ ಭಯೋತ್ಪಾದಕ ಸಾವನ್ನಪ್ಪಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.