ಸಚಿವ ಸುಧಾಕರ್‌ ವಿರುದ್ಧ ಭೂ ಕಬಳಿಕೆ, ಜಾತಿನಿಂದನೆ ದೂರು : ರಾಜೀನಾಮೆಗೆ ಒತ್ತಾಯ

ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ ವೀಡಿಯೋ ವೈರಲ್‌

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರಕಾರದ ಇನ್ನೋರ್ವ ಸಚಿವರಿಗೆ ಹಗರಣದ ಉರುಳು ಸುತ್ತಿಕೊಂಡಿದೆ. ಸಾಂಖ್ಯಿಕ ಸಚಿವ ಡಿ.ಸುಧಾಕರ್​ ಮೇಲೆ ಭೂ ಕಬಳಿಕೆ, ಹಲ್ಲೆ, ಜಾತಿ ನಿಂದನೆ ಎಫ್​ಐಆರ್ ದಾಖಲಾಗಿದ್ದು ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟುಹಿಡಿದಿವೆ. ಈ ನಡುವೆ ಡಿ.ಸುಧಾಕರ್​ ಬ್ರಾಹ್ಮಣರ ಬಗ್ಗೆ ಅಶ್ಲೀಲ ಪದ ಬಳಸಿ ಮಾತನಾಡಿರುವ ವೀಡಿಯೋ ವೈರಲ್ ಆಗತೊಡಗಿದೆ.
ಸಚಿವರ ಹೇಳಿಕೆಯನ್ನು ಖಂಡಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು, ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಜಮೀನು ವ್ಯವಹಾರದ ವಿಷಯದಲ್ಲಿ ಸಚಿವ ಸುಧಾಕರ್ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದು, ಇದು ಅವರ ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ಅಶೋಕ್ ಹಾರನಹಳ್ಳಿ ಸಿಎಂ, ಡಿಸಿಎಂಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ತೆಗೆದುಕೊಂಡ ಪ್ರತಿಜ್ಞಾವಿಧಿಯನ್ನು ಸಚಿವ ಸುಧಾಕರ್ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಒಂದು ಕ್ಷಣ ಸಹ ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಹೊಂದಿಲ್ಲ ಎಂದು ಅಶೋಕ್ ಹಾರನಹಳ್ಳಿ ಹೇಳಿದ್ದಾರೆ.
ಬ್ರಾಹ್ಮಣ ಸಂಸ್ಕೃತಿ, ಜೈನ ಸಂಸ್ಕೃತಿ ಒಂದೇ. ಬ್ರಾಹ್ಮಣರಂತೆ ಜೈನರೂ ಜನಿವಾರ ಧರಿಸುತ್ತಾರೆ. ನಾನು ಬ್ರಾಹ್ಮಣ ಸಮುದಾಯವನ್ನು ನಿಂದನೆ ಮಾಡಿಲ್ಲ. ಸಣ್ಣಪುಟ್ಟ ಸಮುದಾಯವನ್ನು ಪ್ರೀತಿಯಿಂದ ಕಂಡಿದ್ದೇನೆ ಅವರ ಆಚಾರ ವಿಚಾರಗಳಂತೆ ನಮ್ಮ ವಿಚಾರಗಳೂ ಇವೆ. ನಾನು ಸಚಿವ ಎಂಬ ಕಾರಣಕ್ಕಾಗಿ ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ, ಭೂಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದ್ದರೆ ರಾಜೀನಾಮೆ ಕೊಡುತ್ತಿದ್ದೆ. ತಪ್ಪು ಮಾಡದೇ ಇದ್ದಾಗ ಏಕೆ ರಾಜೀನಾಮೆ ನೀಡಲಿ, ಸಿಎಂ, ಡಿಸಿಎಂ ಗೆ ಏನು ದಾಖಲೆ ಕೊಡಬೇಕೋ ಕೊಟ್ಟಿದ್ದೇನೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕೇಳಿದ್ದೇನೆ ಎಂದು ಸಚಿವರು ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಸಚಿವ ಸುಧಾಕರ್ ಅವರ ವಿರುದ್ಧ ದಾಖಲಾಗಿರುವ ದೂರು ಸಿವಿಲ್ ಪ್ರಕರಣ. ಧಮಕಿಗೂ ಪಿಸಿಆರ್ ದೂರಿಗೂ ಬಹಳ ವ್ಯತ್ಯಾಸವಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಇದೊಂದು ಸುಳ್ಳು ಕೇಸ್ ಎಂದು ತಿಳಿದು ಬಂದಿದೆ. ಹೀಗಾಗಿ ಸುಧಾಕರ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್ ಸಚಿವರ ಬೆಂಬಲಕ್ಕೆ ನಿಂತಿದ್ದಾರೆ.

error: Content is protected !!
Scroll to Top