ಚೈತ್ರಾ ಕುಂದಾಪುರಗೆ ಆಶ್ರಯ ಕೊಟ್ಟ ಕಾಂಗ್ರೆಸ್‌ ನಾಯಕಿಗೆ ನೋಟಿಸ್‌

ಕಾಂಗ್ರೆಸ್‌ ಮಾಧ್ಯಮ ವಕ್ತಾರೆಯ ಮನೆಯಲ್ಲಿ ಅಡಗಿದ್ದ ಚೈತ್ರಾ

ಉಡುಪಿ : ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‌ಎ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ವಾಗ್ಮಿ ಚೈತ್ರಾ ಕುಂದಾಪುರಗೆ ಕೊನೆಯ ಕ್ಷಣದಲ್ಲಿ ಆಶ್ರಯ ಕೊಟ್ಟದ್ದು ಕಾಂಗ್ರೆಸ್‌ ನಾಯಕಿ ಎನ್ನಲಾಗುತ್ತಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ ಸೇರಿ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬುಧವಾರ ರಾತ್ರಿ ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್​ ಸ್ಥಳದಿಂದ ಬಂಧಿಸಿದ್ದಾರೆ.
ಇದಕ್ಕೂ ಮೊದಲು ಚೈತ್ರಾ ಕುಂದಾಪುರ ಕಾಂಗ್ರೆಸ್​ ನಾಯಕಿಯ ಮನೆಯಲ್ಲಿ ಅವಿತುಕೊಂಡಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಇದೀಗ ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಕಾಂಗ್ರೆಸ್​ ಮಾಧ್ಯಮ ವಕ್ತಾರೆ ಅಂಜುಂಗೆ ಸಿಸಿಬಿ ನೋಟಿಸ್ ನೀಡಿದೆ.
ಚೈತ್ರಾ ಕುಂದಾಪುರ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 7 ಕೋಟಿ ರೂ. ವಂಚನೆ ಮಾಡಿದ್ದರು ಎಂಬ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸಮಯದ ಹಿಂದೆ ವೈರಲ್‌ ಆಗಿತ್ತು. ಈ ಕುರಿತು ಉದ್ಯಮಿ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ತಲೆಮರೆಸಿಕೊಂಡಿದ್ದ ಚೈತ್ರಾಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್‌ ಮಾಧ್ಯಮ ವಕ್ತಾರೆ ಅಂಜುಂ​ ನಿವಾಸದಲ್ಲಿ ಚೈತ್ರಾ ಅವಿತುಕೊಂಡಿದ್ದರು ಎನ್ನುವ ವಿಚಾರ ಕಾಂಗ್ರೆಸ್‌ಗೂ ಬಹಳ ಮುಜುಗರ ಉಂಟುಮಾಡಿದೆ. ಚೈತ್ರಾಗೆ ಆಶ್ರಯ ನೀಡಿದ್ದ ಅಂಜುಂಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳನ್ನು ಉಡುಪಿಯಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಗೋವಿಂದ ಬಾಬು ಪೂಜಾರಿ ಮುಂಬಯಿಯಲ್ಲಿ ಉದ್ಯಮಿಯಾಗಿದ್ದವರು. ಬಳಿಕ ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ಪ್ರಾರಂಭಿಸಿದ್ದರು. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇದು ತಿಳಿದಿದ್ದ ಚೈತ್ರಾ ಕುಂದಾಪುರ ಮತ್ತು ಸಂಗಡಿಗರು ಬಿಜೆಪಿ ಹೈಕಮಾಂಡ್‌ನಲ್ಲಿ ತಮಗೆ ಬೇಕಾದವರು ಇದ್ದಾರೆ, ಅವರ ಮೂಲಕ ಟಿಕೆಟ್‌ ಕೊಡಿಸುತ್ತೇವೆ ಎಂದು ಸೋಗುಹಾಕಿ ಆಗಾಗ ಬೆಂಗಳೂರಿನಲ್ಲಿ ಗೋವಿಂದ ಬಾಬು ಪೂಜಾರಿಯವರನ್ನು ಭೇಟಿ ಮಾಡಿ ಹಣ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.error: Content is protected !!
Scroll to Top