ಚಂದ್ರನ ಮೇಲೆ ಯಶಸ್ವಿಯಾಗಿ ಮತ್ತೊಂದು ಕಡೆಗೆ ಜಿಗಿದ ವಿಕ್ರಮ್‌ ಲ್ಯಾಂಡರ್‌

ದೆಹಲಿ : ಚಂದ್ರಯಾನ-3 ಕಾರ್ಯಾಚರಣೆಯ ವಿಕ್ರಮ್ ಲ್ಯಾಂಡರ್ ಮತ್ತೆ ಚಂದ್ರನ ಮೇಲೆ ಇಳಿದಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ, ತನ್ನ ಯೋಜನೆಯ ಉದ್ದೇಶಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ. ಭಾನುವಾರ ನಡೆದ ಚಂದ್ರಯಾನ-3 ಲ್ಯಾಂಡರ್ ಹಾಪ್ ಪರೀಕ್ಷೆ ಅಂದರೆ ಮತ್ತೊಂದು ಕಡೆಗೆ ಜಿಗಿತ ಯಶಸ್ವಿಯಾಗಿದೆ. ಆಜ್ಞೆಯ ಮೇರೆಗೆ ವಿಕ್ರಮ್ ಲ್ಯಾಂಡರ್ ತನ್ನ ಇಂಜಿನ್‌ಗಳನ್ನು ಹಾರಿಸಿತು, ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಹಾರಿ, 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಇಸ್ರೋ ಮಾಹಿತಿ ನೀಡಿದೆ.

ಭವಿಷ್ಯದಲ್ಲಿ ಯೋಜನೆಯ ಉದ್ದೇಶ ಮುಗಿದ ಬಳಿಕ ಲ್ಯಾಂಡರ್‌ಗಳನ್ನು ವಾಪಸ್‌ ಭೂಮಿಗೆ ತರುವ ಹಾಗೂ ಮಾನವ ಸಹಿತ ಯೋಜನೆಗಳನ್ನು ಉತ್ತೇಜಿಸುವುದು ಈ ಪ್ರಯೋಗದ ಪ್ರಮುಖ ಉದ್ದೇಶವಾಗಿದೆ. ವಿಕ್ರಮ್‌ ಲ್ಯಾಂಡರ್‌ನ ಎಲ್ಲ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯಕರವಾಗಿವೆ. ನಿಯೋಜಿತ ರ‍್ಯಾಂಪ್‌, ChaSTE ಮತ್ತು ILSA ಗಳನ್ನು ಮಡಚಲಾಗಿತ್ತು. ಪ್ರಯೋಗದ ನಂತರ ಅವುಗಳನ್ನು ಯಶಸ್ವಿಯಾಗಿ ಮರುನಿಯೋಜಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಆ. 23 ರಂದು ಚಂದ್ರಯಾನ – 3ರ ಭಾಗವಾಗಿದ್ದ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡಿಂಗ್‌ ಆಗಿತ್ತು. ಅದಾದ ಬಳಿಕ ಪ್ರಜ್ಞಾನ್‌ ರೋವರ್‌ ಚಂದ್ರನ ಮೇಲೆ ಇಳಿದು ಹಲವು ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. ಚಂದ್ರನ ಮೇಲೆ ಆಮ್ಲಜನಕ, ಗಂಧಕ ಸೇರಿ ಹಲವು ಅಂಶಗಳು ಇರುವುದನ್ನು ಪತ್ತೆ ಮಾಡಿತ್ತು. ಅದರ ಜೊತೆ ಚಂದ್ರನ ಮೇಲಿನ ತಾಪಮಾನದ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಕೂಡ ಪ್ರಜ್ಞಾನ್‌ ನೀಡಿತ್ತು.

error: Content is protected !!
Scroll to Top