ಹೆಚ್ಚಾಗಲಿದೆ ಇಂದಿರಾ ಕ್ಯಾಂಟೀನ್‌ ಊಟದ ಬೆಲೆ

ಬಡವರ ಕ್ಯಾಂಟೀನ್‌ಗೂ ಬೆಲೆ ಹೆಚ್ಚಳದ ಬರೆ

ಬೆಂಗಳೂರು: ಬಡವರಿಗೆ ಕಡಿಮೆ ಬೆಲೆಗೆ ಊಟ ತಿಂಡಿ ಒದಗಿಸಲು ಪ್ರಾರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್​ನಲ್ಲಿ ಕೂಡ ಬೆಲೆ ಹೆಚ್ಚಾಗಲಿದೆ. ಬಡವರಿಗೆ ನೀಡುತ್ತಿದ್ದ ಊಟದ ಬೆಲೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಶನಿವಾರ ಒಪ್ಪಿಗೆ ನೀಡಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂದಿರಾ ಕ್ಯಾಂಟಿನ್ ಊಟದ ಬೆಲೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್​ಗಳಲ್ಲಿ ಹಳೇ ದರ ಮುಂದುವರಿಯಲಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್. ಕೆ. ಪಾಟೀಲ್, ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟಿನ್ ಊಟದ ದರ 27 ರೂ. ನಿಗದಿ ಮಾಡಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್​ಗಳಲ್ಲಿ ಒಂದು ಊಟದ ಬೆಲೆ 60 ರೂ. ದರ ನಿಗದಿ ಮಾಡಲಾಗಿದೆ. ಆದರೆ ಗ್ರಾಹಕರಿಂದ ಕೇವಲ 27 ರೂ. ಸಂಗ್ರಹಿಸಲಿದ್ದು, ಉಳಿದ 33 ರೂ. ಸಬ್ಸಿಡಿಯನ್ನು ಸರ್ಕಾರ ನೀಡಲಿದೆ. ರಾಜ್ಯಾದ್ಯಂತ ನೂತನವಾಗಿ ನಿರ್ಮಾಣವಾಗಲಿರುವ ಇಂದಿರಾ ಕ್ಯಾಂಟೀನ್​​ಗಳಲ್ಲಿ ಈ ಹೊಸ ಬೆಲೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್​ ತೆರೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೊಸ ಇಂದಿರಾ ಕ್ಯಾಂಟೀನ್​ಗೆ 27 ಕೋಟಿ ರೂ. ನೀಡಲು ಅನುಮೋದಿಸಲಾಗಿದೆ. ಸ್ಥಳೀಯ ತಿಂಡಿ ತಿನಿಸು ಗಮನದಲ್ಲಿಟ್ಟುಕೊಂಡು ಇಂದಿರಾ ಕ್ಯಾಂಟೀನ್ ಮೆನು ಇರಲಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.







































































error: Content is protected !!
Scroll to Top