ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಆ. 2ರಿಂದ ಆಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. 370ನೇ ವಿಧಿಯನ್ನು ಆಗಸ್ಟ್ 2019ರಲ್ಲಿ ಶಾಸಕಾಂಗ ಮತ್ತು ಕಾರ್ಯಕಾರಿ ನಿರ್ಧಾರಗಳ ಮೂಲಕ ರದ್ದುಗೊಳಿಸಲಾಯಿತು, ನಂತರ ಸಂಸತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯ ಪ್ರಕಾರ ರಾಜ್ಯವನ್ನು ವಿಭಜಿಸಲು ಅಂಗೀಕರಿಸಿತು. ಜು. 11ರಂದು ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಆ. 2ರಿಂದ ಆರಂಭಿಸುವುದಾಗಿ ಹೇಳಿದೆ. ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ಪ್ರತಿದಿನವೂ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಹೇಳಿದೆ. ಜು. 27 ರೊಳಗೆ ಎಲ್ಲಾ ದಾಖಲೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಜೊತೆಗೆ ಈ ದಾಖಲೆಗಳನ್ನು ನಿರ್ವಹಿಸಲು ಇಬ್ಬರು ವಕೀಲರನ್ನು ನೊಡೆಲ್ ಅಧಿಕಾರಿಗಳಾಗಿ ನೇಮಿಸಲಾಗುವುದು ಎಂದು ಪೀಠ ಹೇಳಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಸುಮಾರು ನಾಲ್ಕು ವರ್ಷಗಳ ಬಳಿಕ ವಿಚಾರಣೆ ನಡೆಯುತ್ತಿದೆ.
ಜಮ್ಮು-ಕಾಶ್ಮೀರ 370ನೇ ವಿಧಿ ರದ್ದು ಕುರಿತು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು : ಆಗಸ್ಟ್ 2ರಿಂದ ವಿಚಾರಣೆ ಆರಂಭ


































