ಇಂದು ಸಿದ್ದರಾಮಯ್ಯ ದಾಖಲೆಯ 14ನೇ ಬಜೆಟ್‌ ಮಂಡನೆ

ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಡೀಕರಣದ ಕುತೂಹಲ

ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತನ್ನ ದಾಖಲೆಯ 14ನೇ ಬಜೆಟ್‌ ಮಂಡಿಸಲಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಒತ್ತಡ, ಎತ್ತಿನಹೊಳೆ, ಮೇಕೆದಾಟು, ಕೃಷ್ಣಾ-ಭದ್ರಾ ಮೇಲ್ದಂಡೆ, ಆಲಮಟ್ಟಿಯಂತಹ ಬೃಹತ್‌ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡುವ ಅನಿವಾರ್ಯತೆ, ಸಿಬ್ಬಂದಿ ವೇತನ ಹೆಚ್ಚಳ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವಂತಹ ಸಾಲು ಸಾಲು ಸವಾಲುಗಳ ಒತ್ತಡ ಇರುವುದರಿಂದ ಸಹಜವಾಗಿ ಬಜೆಟ್‌ ಮೇಲೆ ನಿರೀಕ್ಷೆ ದೊಡ್ಡದಿದೆ.
ಆದರೆ ಕಾಂಗ್ರೆಸ್‌ ಚುನಾವಣೆ ಗೆಲ್ಲಲು ಘೋಷಿಸಿದ ಐದು ಗ್ಯಾರಂಟಿಗಳನ್ನು ಕೊಡಲು ಸುಮಾರು 60 ಸಾವಿರ ಕೋ. ರೂ. ಬೇಕು. ಇದಕ್ಕೆ ಸಂಪನ್ಮೂಲ ಕ್ರೋಡೀಕರಣ ಮಾಡಲು ಬಜೆಟ್‌ನಲ್ಲಿ ಯಾವೆಲ್ಲ ಕಸರತ್ತು ನಡೆಸಲಿದ್ದಾರೆ ಎಂಬ ಕುತೂಹಲ ಜನಸಾಮಾನ್ಯರಲ್ಲಿದೆ. ಸಂಪನ್ಮೂಲವೆಲ್ಲ ಉಚಿತ ಕೊಡುಗೆಗಳಿಗೆ ಹೋಗಲಿರುವುದರಿಂದ ದೊಡ್ಡ ಯೋಜನೆಗಳು ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಬಜೆಟ್‌ನಲ್ಲಿ ಮತ್ತೆ ಪ್ರತ್ಯಕ್ಷ ಅಥವಾ ಪರೋಕ್ಷ ತೆರಿಗೆ ಏರಿಕೆಯ ಪ್ರಸ್ತಾಪ ಇಟ್ಟರೆ ಗಾಯದ ಮೇಲೆ ಉಪ್ಪು ಸವರಿದಂತಾಗಬಹುದು.
ಇಂದು ಮಧ್ಯಾಹ್ನ 12 ಗಂಟೆಗೆ ಮಂಡಿಸಲಿರುವ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳ ಹೊರತಾಗಿ ಯಾವುದೇ ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಕಡಿಮೆಯಿದ್ದರೂ, ಡೆಲಿವರಿ ಬಾಯ್‌ಗಳಂತಹ ಅಸಂಘಟಿತ ಕಾರ್ಮಿಕರಿಗೆ ಬಂಪರ್‌ ಘೋಷಣೆ ಮಾಡುವ ಸಾಧ್ಯತೆಯಿದೆ. ಗ್ಯಾರಂಟಿ ಹೊರೆ ಸರಿದೂಗಿಸಲು ಶಾಸಕರ ಕ್ಷೇತ್ರಗಳ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಡಿತವಾಗುವ ಸಂಭವವಿದೆ. ಜತೆಗೆ ವ್ಯಾಪಾರ ಮತ್ತು ಸೇವಾ ತೆರಿಗೆ ಹೆಚ್ಚಳ, ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಆಗಬಹುದು.
2023-24ನೇ ಸಾಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ 3.09 ಲಕ್ಷ ಕೋಟಿ ರೂ. ಬಜೆಟ್‌ ಗಾತ್ರವನ್ನು 3.33-3.35 ಲಕ್ಷ ಕೋಟಿಗೆ ಹೆಚ್ಚಳ ಮಾಡುವ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಅವರ ಹೆಗಲೇರಲಿದೆ. ಈಗಾಗಲೇ 13 ಬಜೆಟ್‌ ಮಂಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಅವರ ದಾಖಲೆ ಸರಿಗಟ್ಟಿರುವ ಸಿದ್ದರಾಮಯ್ಯ ಶುಕ್ರವಾರ 14ನೇ ಬಜೆಟ್‌ ಮಂಡನೆ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ.













































































error: Content is protected !!
Scroll to Top