ಕಾರ್ಕಳ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮತ್ತು ಕಾರ್ಕಳ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಲೇಖಕಿ ಸಾವಿತ್ರಿ ಮನೋಹರ್ ಅವರ ನಮ್ಮ ಸಂಸಾರ ಎಂಬ 22ನೇ ನಾಟಕ ಕೃತಿಯ ಲೋಕಾರ್ಪಣಾ ಕಾರ್ಯಕ್ರಮ ಜೂ. 29 ರಂದು ಪ್ರಕಾಶ್ ಹೋಟೆಲ್ನ ಸಂಭ್ರಮ ಸಭಾಂಗಣದಲ್ಲಿ ಜರುಗಿತು.
ಕೃತಿ ಅನಾವರಗೊಳಿಸಿ ಮಾತನಾಡಿದ ಹಿರಿಯ ಲೇಖಕಿ ಇಂದಿರಾ ಹಾಲಂಬಿ, ಕೃತಿಯು ಸಾಂಸರಿಕ ಬಂಧಕ್ಕೆ ಹೊಸ ರೂಪ ನೀಡಿದ್ದು, ಸ್ತ್ರೀವಾದ ಹಾಸ್ಯ ಲೇಪದೊಂದಿಗೆ ಸುಖ್ಯಾತಗೊಂಡಿರುವ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಅನಂತಪದ್ಮನಾಭ ರಾವ್ ಮಾತನಾಡಿ, ಸಾಹಿತ್ಯದ ಅಭಿರುಚಿ ಸಂಸಾರದ ಸೂತ್ರವನ್ನು ಗಟ್ಟಿಗೊಳಿಸುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, ನಾಟಕದಲ್ಲಿ ವಾಸ್ತವ ಪ್ರಜ್ಞೆ ಹಾಸು ಹೊಕ್ಕಗಿರುವ ರೀತಿ, ಬರವಣಿಗೆಯ ಮೇಲೆ ಲೇಖಕಿಗಿರುವ ಒಲವು ಮತ್ತು ಸಂಸಾರವೇ ಸಾಹಿತ್ಯವಾದ ಬಗೆ ಕೃತಿಯಲ್ಲಿ ಅಡಕವಾಗಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಮಕ್ಕಳ ಸಾಹಿತ್ಯ ಸಂಗಮ ಕಾರ್ಕಳ ಘಟಕದ ಅಧ್ಯಕ್ಷ ತುಕಾರಾಮ ನಾಯಕ್ ಹಾಗೂ ವಿ. ಮನೋಹರ್ ರಾವ್ ಉಪಸ್ಥಿತರಿದ್ದರು. ಮಕ್ಕಳ ಸಾಹಿತ್ಯ ಸಂಗಮ ಕಾರ್ಕಳ ಘಟಕದ ಉಪಾಧ್ಯಕ್ಷೆ ಜಾಹ್ನವಿ ಪ್ರಾರ್ಥಿಸಿದರು. ಲೇಖಕಿ ಸಾವಿತ್ರಿ ಮನೋಹರ್ ಸ್ವಾಗತಿಸಿ, ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಮಾಲತಿ ಜಿ. ಪೈ ಕಾರ್ಯಕ್ರಮ ನಿರೂಪಿಸಿ, ಮನೋರಮ ರೈ ವಂದಿಸಿದರು.










































