ಆಟೋರಿಕ್ಷಾ ತಡೆದು ನಿಲ್ಲಿಸಿ ಹಲ್ಲೆ ಮಾಡಿ ಪರಾರಿಯಾದ ಪತಿ
ಬಂಟ್ವಾಳ: ಕುಟುಂಬದ ಮನಸ್ತಾಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಹಾಗೂ ಮಾವನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್‌ನಲ್ಲಿ ನಡೆದಿದೆ.
ಆರೋಪಿಯನ್ನು ಕುಮಾರ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 10.30ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯಾ ಆಟೋರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ಕಡೆಗೆ ಹೋಗುತ್ತಿರುವಾಗ ವೇಳೆ ದಿವ್ಯಾಳ ಗಂಡ ಕುಮಾರ ಆಟೋವನ್ನು ತುಂಬೆ ಜಂಕ್ಷನ್‌ನಲ್ಲಿ ತಡೆದು ನಿಲ್ಲಿಸಿ ಚೂರಿಯಿಂದ ಪತ್ನಿ ದಿವ್ಯಾಗೆ ಇರಿಯಲು ಯತ್ನಿಸಿದ್ದಾನೆ.
ಈ ವೇಳೆ ಬಿಡಿಸಲು ಹೋದ ಮಾವ ರಾಜೀವರಿಗೆ ಚೂರಿಯಿಂದ ಇರಿದಿದ್ದು, ಮೂವರ ಮಧ್ಯೆಯೂ ತಳ್ಳಾಟ ನಡೆದು ರಾಜೀವ ಹಾಗೂ ದಿವ್ಯಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಕುರಿತು ಅಟೋ ಚಾಲಕ ಯಶೋಧರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ. ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.


































