ಮುಂಬೈ ಉದ್ಯಮಿ ಐಕಳ ಹರೀಶ್ ಶೆಟ್ಟಿ ಮನೆಯಿಂದ ಚಿನ್ನಾಭರಣ ಕಳವು ಪ್ರಕರಣ

ಕಾರ್ಕಳದ ಓರ್ವ ಸೇರಿದಂತೆ ಚಿನ್ನ ಸಹಿತ ಇಬ್ಬರ ಬಂಧನ

ಕಾರ್ಕಳ : ಮುಂಬೈ ಉದ್ಯಮಿ ಐಕಳ ಹರೀಶ್ ಶೆಟ್ಟಿ ಮನೆಯಿಂದ ಕಳವಾಗಿದ್ದ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಸಹಿತ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳದ ಗಣೇಶ ನಾಯ್ಕ್(26), ಕೊಡಗಿನ ರಂಜಿತ್ ಕೆ.ಆರ್(26) ಬಂಧಿತ ಆರೋಪಿಗಳು. ಬಂಧಿತರಿಂದ 1 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ
2023 ರ ಜ. 15 ರಂದು ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಶ್ರೀ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯ ಎದುರಿನ ಬಾಗಿಲಿನ ಲಾಕನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳವುಗೈದಿದ್ದರು. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ಮಂಗಳೂರು ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿ ಚಾಣಕ್ಷತನದಿಂದ ಪ್ರಕರಣವನ್ನು ಭೇದಿಸಿದ್ದಾರೆ.

ಗಣೇಶ ನಾಯ್ಕ್, ರಂಜಿತ್ ಕೆ.ಆರ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 55 ಲಕ್ಷ ರೂ.ಮೌಲ್ಯದ 1 ಕೆಜಿ ವಿವಿಧ ನಮೂನೆಯ ಚಿನ್ನಾಭರಣ, 2 ಮೊಬೈಲ್ ಫೋನ್ ಗಳು, ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಆರೋಪಿಗಳು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

ಈ ಆರೋಪಿಗಳ ಪೈಕಿ ಗಣೇಶ್ ನಾಯ್ಕ್ ಹಾಗೂ ಇತರ ಇಬ್ಬರು ಆರೋಪಿಗಳು ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳರಾಯಿ ಚರ್ಚ್ ರಸ್ತೆಯಲ್ಲಿನ ಮನೆಯೊಂದರ ಬಾಗಿಲಿನ ಬೀಗವನ್ನು ಒಡೆದು ಮನೆಯಲ್ಲಿನ ಬೆಲೆಬಾಳುವ ಸೊತ್ತುಗಳನ್ನು ಹಾಗೂ ಮಾರುತಿ ಬ್ರೀಝಾ ಕಾರನ್ನು ಕಳವುಗೈದ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಪ್ರಕರಣವು ಕೂಡಾ ಪತ್ತೆಯಾಗಿರುತ್ತದೆ. ಆರೋಪಿಗಳ ಪೈಕಿ ಗಣೇಶ್ ನಾಯ್ಕ್ ಎಂಬಾತನ ವಿರುದ್ಧ ಈ ಹಿಂದೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿರುತ್ತದೆ.

ಈ ಕಳವು ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ನಗರ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್. ಎಂ., ಪಿಎಸ್ಐಯವರಾದ ರಾಜೇಂದ್ರ ಬಿ., ಸುದೀಪ್ ಎಂ. ವಿ., ಶರಣಪ್ಪ ಭಂಡಾರಿ, ಎಎಸ್ಐಯವರಾದ ಶಶಿಧರ ಶೆಟ್ಟಿ, ಹರೀಶ್, ಮೋಹನ್ ಕೆ. ವಿ. ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.















































































error: Content is protected !!
Scroll to Top