ನೂರಕ್ಕೂ ಅಧಿಕ ವಕೀಲರ ತಂಡದಿಂದ ಕಾನೂನು ನೆರವು
ಬೆಂಗಳೂರು: ನಿಚ್ಚಳ ಬಹುಮತದಿಂದ ಸರಕಾರ ರಚಿಸಿದ ಬಳಿಕ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ದಬ್ಟಾಳಿಕೆ ಮಾಡುತ್ತಿದೆ ಎಂಬ ಆರೋಪವಿದೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ದಾಖಲಿಸುವುದು, ರೌಡಿಶೀಟ್ಗೆ ಸೇರಿಸುವುದು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ವಿರುದ್ಧ ಕೇಸ್ ದಾಖಲಿಸುವುದು ಮುಮತಾದ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ. ಈ ದೌರ್ಜನ್ಯವನ್ನು ತಡೆಯಲು ಮತ್ತು ಪೊಲೀರನ್ನು ಬಳಿಸ ತೊಂದರೆ ನೀಡಿದರೆ ಅದನ್ನು ಎದುರಿಸಲು ಕಾರ್ಯಕರ್ತರಿಗೆ ನೆರವಾಗುವ ಉದ್ದೇಶದಿಂದ ಬಿಜೆಪಿ ಕಾನೂನು ಸಹಾಯವಾಣಿ ಪ್ರಾರಂಭಿಸಿದೆ. 18003091907 ಇದು ಬಿಜೆಪಿಯ ಕಾನೂನು ಸಹಾಯವಾಣಿಯ ನಂಬರ್.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಯುವಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಹೆಲ್ಪ್ಲೈನ್ ಉದ್ಘಾಟಿಸಿದ್ದಾರೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಾಗೂ ನಮ್ಮ ಪರವಾಗಿ ಕೆಲಸ ಮಾಡುವವರ ಮೇಲೆ ದ್ವೇಷದ ರಾಜಕೀಯ ಮಾಡುವ ಮುನ್ಸೂಚನೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ 100 ವಕೀಲರ ತಂಡ ಸಹಾಯವಾಣಿ ರಚಿಸಿದೆ. ಸದನದ ಒಳಗೆ ಮತ್ತು ಹೊರಗೆ ಸರಕಾರ ನಡೆಸುವ ದೌರ್ಜನ್ಯದ ವಿರುದ್ಧ ಹೋರಾಟ ಸಂಘಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಹೈಕೋರ್ಟ್ ಪೀಠವಿರುವ ಎಲ್ಲ ಜಾಗಗಳಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರು ಮತ್ತು ವಕೀಲರ ತಂಡದ ರಚನೆಯಾಗಿದೆ. ರಾಜ್ಯದ ನೂರಕ್ಕೂ ಹೆಚ್ಚು ವಕೀಲರು ಈ ಸಹಾಯವಾಣಿಯನ್ನು ನಿರ್ವಹಿಸಲು ಸಹಕರಿಸುತ್ತಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾನೂನಾತ್ಮಕವಾಗಿ ನಮ್ಮ ಕಾರ್ಯಕರ್ತರನ್ನು ಕಟ್ಟಿ ಹಾಕುವ ಕೆಲಸಕ್ಕೆ ಮುಂದಾಗಿದೆ. ಮಂತ್ರಿಗಳ ಸಹಿತವಾಗಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಸಹಾಯವಾಣಿ ಪ್ರಾರಂಭಿಸಲಾಗುತ್ತಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಹೇಳಿದ್ದಾರೆ.





































