ಕೇರಳಕ್ಕೆ ಕೂಲಿ ಕೆಲಸ ಹುಡುಕಿಕೊಂಡು ಹೊರಟಿದ್ದ ಕಾರ್ಮಿಕ
ಪಾಟ್ನಾ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಪಟ್ಟಣದ ನಿವಾಸಿ ರಾಜಾ ಪಟೇಲ್ ಎಂಬವರು ಸಾವನ್ನಪ್ಪಿದ್ದಾರೆ. ಆದರೆ ಸಾವಿನ ಆಘಾತದ ಜತೆಗೆ ಅಪಘಾತ ಸ್ಥಳದಿಂದ ರಾಜಾ ಪಟೇಲ್ ಅವರ ಮೃತದೇಹವನ್ನು ಮನೆಗೆ ತರಲು ಆಂಬ್ಯುಲೆನ್ಸ್ ನವರು 45,000 ರೂ.ಗೆ ಬೇಡಿಕೆಯಿಟ್ಟಿರುವುದು ಋಾಜಾ ಪಟೇಲ್ ಕುಟುಂಬಕ್ಕೆ ಇನ್ನೊಂದು ಆಘಾತ ನೀಡಿದೆ. ಅವರ ಕುಟುಂಬ ಸದಸ್ಯರು ಈ ಮೊತ್ತವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದಾರೆ. ರಾಜಾ ಪಟೇಲ್ ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಂಡು ಆರು ಸ್ನೇಹಿತರೊಂದಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಏರಿದ್ದರು.
ರಾಜ ನಮ್ಮ ಕುಟುಂಬದ ಏಕೈಕ ಜೀವನಾಧಾರ. ಅವನು ತನ್ನ ಸ್ನೇಹಿತರೊಂದಿಗೆ ಕೇರಳದ ತಿರುವನಂತಪುರಕ್ಕೆ ಹೋಗಲು ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಏರಿದ್ದರು. ಇದೀಗ ಕುಟುಂಬ ಸದಸ್ಯನ ಸಾವು ಕಣ್ಣೀರು ತರಿಸುವುದರೊಂದಿಗೆ ಮೃತದೇಹವನ್ನು ಹುಟ್ಟೂರಿಗೆ ಒಯ್ಯಲು ಆಂಬ್ಯುಲೆನ್ಸ್‌ನವರು 45 ಸಾವಿರ ರೂ. ಕೇಳುತ್ತಿದ್ದು, ದಿನನಿತ್ಯದ ಆಹಾರಕ್ಕಾಗಿ ನಾವು ಹೆಣಗಾಡುತ್ತಿರುವಾಗ ಆಂಬ್ಯುಲೆನ್ಸ್‌ಗೆ ಹಣ ಹೇಗೆ ಹೊಂದಿಸುವುದು ಎಂದು ಪ್ರಶ್ನಿಸುತ್ತಿದ್ದಾರೆ. ಕೇರಳ ತಲುಪಿ ಕೆಲಸ ಮಾಡಿ ರಾಜಾ ನಮಗೆ ಹಣ ಕಳುಹಿಸುತ್ತಾರೆ ಎಂದು ನಾವು ಭಾವಿಸಿದ್ದೆವು. ಈಗ ನಾನು ಏನು ಮಾಡಲಿ? ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡುತ್ತಿಲ್ಲ ಎಂದು ಮೃತ ರಾಜಾ ಪಟೇಲ್ ಅವರ ತಂದೆ ಭುವನ್ ಪಟೇಲ್ ಹೇಳಿದ್ದಾರೆ.
ರಾಜಾ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಎರಡು ತಿಂಗಳ ಮಗುವಿದೆ. ಅವನ ಹೆಂಡತಿ ಮತ್ತು ತಾಯಿ ಅಸಹಾಯಕರಾಗಿದ್ದಾರೆ. ರಾಜಾ ಅವರ ಇಬ್ಬರು ಸ್ನೇಹಿತರಾದ ವಿಜಯ್ ಮತ್ತು ಸಂಜಯ್ ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.