ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಅವಧಿ ಪೂರ್ಣ

ಯಾರಾಗಲಿದ್ದಾರೆ ಮುಂದಿನ ಅಧ್ಯಕ್ಷರು ?

ಕಾರ್ಕಳ : ಪುರಸಭೆ ಅ‍ಧ್ಯಕ್ಷ – ಉಪಾಧ್ಯಕ್ಷರ ಅವಧಿ ಪೂರ್ಣಗೊಂಡಿದ್ದು, ಮುಂದಿನ ಅ‍ಧ್ಯಕ್ಷರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಇದೀಗ ಗರಿಗೆದರಿದೆ. ಈ ಹಿಂದೆ ಕಾರ್ಕಳ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಸುಮಾ ಕೇಶವ್‌ ಅಧ್ಯಕ್ಷರಾಗಿ, ಪಲ್ಲವಿ ಪ್ರವೀಣ್‌ ಉಪಾಧ್ಯಕ್ಷರಾಗಿದ್ದರು. ಎ. 27ರಂದು ಅವರ ಅಧಿಕಾರವಧಿ ಕೊನೆಗೊಂಡಿದೆ.

2018ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸರಕಾರ ಮೀಸಲಾತಿ ಪ್ರಕಟಿಸಿದ್ದಾಗ್ಯೂ ಈ ಪಟ್ಟಿಯನ್ನು ಪ್ರಶ್ನಿಸಿ ರಾಜ್ಯಾದ್ಯಂತ ಕೆಲ ಸ್ಥಳೀಯ ಸಂಸ್ಥೆಗಳ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪರಿಣಾಮ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಳಂಬವಾಯಿತು. ತದನಂತರ 2020ರ ಅಕ್ಟೋಬರ್‌ ತಿಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು.

23 ಸದಸ್ಯರನ್ನು ಹೊಂದಿರುವ ಕಾರ್ಕಳ ಪುರಸಭೆಯಲ್ಲಿ 11 ಮಂದಿ ಬಿಜೆಪಿ, 11 ಮಂದಿ ಕಾಂಗ್ರೆಸ್‌ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಸಮಬಲದ ಸ್ಥಾನ ಹೊಂದಿರುವ ಕಾರಣ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಕಿಂಗ್‌ ಮೇಕರ್‌ ಆಗಬೇಕಿತ್ತು. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಸಂಸದರ ಮತ ಗಣನೆಗೆ ಇರುವುದರಿಂದ ಅವರ ಮತವೇ ನಿರ್ಣಾಯಕವಾಯಿತು.

ಮುಂದಿನ ಅಧ್ಯಕ್ಷರು ಯಾರು ?
ಮೀಸಲಾತಿ ಆಧಾರದಲ್ಲಿ ಮುಂದಿನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಪರಿಶಿಷ್ಟ ಜಾತಿ ಮಹಿಳೆಯಾದರೆ ಪ್ರತಿಮಾ ರಾಣೆ (ಕಾಂಗ್ರೆಸ್), ಪರಿಶಿಷ್ಟ ಜಾತಿ ಸಾಮಾನ್ಯವಾದಲ್ಲಿ ಪ್ರದೀಪ್‌ ರಾಣೆ‌ (ಬಿಜೆಪಿ), ಪರಿಶಿಷ್ಟ ಪಂಗಡಕ್ಕೆ ಬಂದಲ್ಲಿ ಸೋಮನಾಥ ನಾಯಕ್‌ (ಕಾಂಗ್ರೆಸ್)‌ ಅವರಿಗೆ ಅವಕಾಶ ಒದಗಿಬರಲಿದೆ. ಜನರಲ್‌ ಕೆಟಗರಿಯಾದಲ್ಲಿ ಎರಡನೇ ಬಾರಿಗೆ ಪುರಸಭಾ ಸದಸ್ಯರಾಗಿರುವ ಯೋಗೀಶ್‌ ದೇವಾಡಿಗ (ಬಿಜೆಪಿ), ಸಾಮಾನ್ಯ ಮಹಿಳೆಯಾದಲ್ಲಿ ಬಿಜೆಪಿಯಲ್ಲಿ ಸುಮಾ ಕೇಶವ್‌, ಶೋಭಾ ಆರ್. ದೇವಾಡಿಗ, ಶಶಿಕಲಾ ಶೆಟ್ಟಿ, ಮಮತಾ ಪೂಜಾರಿ, ಪಲ್ಲವಿ ಪ್ರವೀಣ್‌, ನೀತಾ ಆಚಾರ್ಯ, ಮೀನಾಕ್ಷಿ ಗಂಗಾಧರ್‌, ಭಾರತೀ ಅಮೀನ್‌ ಎಲ್ಲರೂ ಅರ್ಹರೇ ಆಗುತ್ತಾರೆ. ಇದೇ ತಿಂಗಳಲ್ಲಿ ಮೀಸಲಾತಿ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

































































error: Content is protected !!
Scroll to Top