ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಚಿಂತನ ಮಂಥನ

ಸುನಿಲ್‌, ರವಿ, ಶೋಭಾ ಹೆಸರು ಮುನ್ನೆಲೆಗೆ

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಈಗ ದೊಡ್ಡ ಮಟ್ಟದಲ್ಲಿ ಚಿಂತನ ಮಂಥನ ನಡೆಸುತ್ತಿದೆ. ಸೋಲಿನ ಕಾರಣದ ಜತೆಗೆ ಮುಂದಿನ ಕಾರ್ಯತಂತ್ರ ಕೂಡ ಮುಖ್ಯವಾಗಿ ಚರ್ಚೆಗೀಡಾಗುತ್ತಿರುವ ವಿಚಾರ. ಬಿಜೆಪಿಗೆ ಸದ್ಯಕ್ಕೆ ತುರ್ತಾಗಿ ಬೇಕಾಗಿರುವುದು ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ. ಈ ಎರಡು ಸ್ಥಾನಗಳಿಗೆ ಸಮರ್ಥರನ್ನು ತಂದು ಕೂರಿಸಿ ಲೋಕಸಭೆ ಚುನಾವಣೆಗಾಗುವಾಗ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ದೊಡ್ಡ ಟಾಸ್ಕ್‌ ಬಿಜೆಪಿ ಮುಂದಿದೆ.
ಚುನಾವಣೆ ಸೋಲಿಗೆ ರಾಜ್ಯದ ನಾಯಕರನ್ನು ಸೂಕ್ತವಾಗಿ ಬಳಸಿಕೊಳ್ಳದೆ ಇರುವುದು ಕಾರಣ ಎಂಬ ಅಂಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕತ್ವವನ್ನು ಗಟ್ಟಿಗೊಳಿಸುವತ್ತ ಬಿಜೆಪಿ ಮುಂದಾಗಿದೆ. ಇದಕ್ಕೆ ಪ್ರಬಲ ಹಿಂದುತ್ವ ಪ್ರತಿಪಾದನೆಯೊಂದಿಗೆ ಎದುರಾಳಿಗಳನ್ನು ಮಾತಿನಲ್ಲೇ ಕಟ್ಟಿ ಹಾಕುವ ವಾಕ್ಚಾತುರ್ಯ ಬೇಕು. ಇಂಥ ನಾಯಕರು ಯಾರು ಇದ್ದಾರೆ ಎಂದು ನೋಡಿದಾಗ ಕೆಲವೇ ಹೆಸರುಗಳು ಮಾತ್ರ ಕಣ್ಣ ಮುಂದೆ ಬರುತ್ತವೆ.
ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅಧಿಕಾರವಧಿ 2022ಕ್ಕೆ ಮುಗಿದಿದ್ದರೂ ವಿಧಾನಸಭೆ ಚುನಾವಣೆಗಾಗಿ ಅವರನ್ನು ಒಂದು ವರ್ಷ ಮುಂದುವರಿಸಲಾಗಿತ್ತು. ಇದೀಗ ಚುನಾವಣೆಯ ನಿರಾಶದಾಯಕ ಸೋಲಿಗೆ ಅವರ ಕಾರ್ಯಶೈಲಿಯೂ ಕಾರಣ ಎಂಬ ಆರೋಪಗಳಿರುವುದರಿಂದ ರಾಜ್ಯಾಧ್ಯಕ್ಷರ ಬದಲಾವಣೆ ಖಚಿತ. ವಿಪಕ್ಷ ನಾಯಕ ಆಯ್ಕೆಯಾದ ಬೆನ್ನಿಗೆ ರಾಜ್ಯಾಧ್ಯಕ್ಷರತ್ತ ಬಿಜೆಪಿ ವರಿಷ್ಠರು ಗಮನ ಹರಿಸಲಿದ್ದಾರೆ.
ಬಿಜೆಪಿಯು ಬಲಪಂಥೀಯ ನಾಯಕರಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಇಂಧನ ಸಚಿವ ವಿ. ಸುನೀಲ್ ಕುಮಾರ್ ಈ ಮೂವರಿಗೆ ರಾಜ್ಯದಲ್ಲಿ ಪ್ರಮುಖ ಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದೆ. ಈ ಪೈಕಿ ಸುನಿಲ್‌ ಕುಮಾರ್‌ಗೆ ವಿಪಕ್ಷ ನಾಯಕ ಅಥವಾ ರಾಜ್ಯಾಧ್ಯಕ್ಷ ಈ ಪೈಕಿ ಒಂದು ಸ್ಥಾನ ಸಿಗುವ ಸಾಧ್ಯತೆಯಿದೆ. ಚುನಾವಣೆ ಸೋಲಿನ ಬಳಿಕ ಬಿಜೆಪಿ ಫಯರ್‌ ಬ್ರಾಂಡ್‌ ನಾಯಕರ ಕೊರತೆಯನ್ನೂ ಅನುಭವಿಸುತ್ತಿದೆ. ಇಷ್ಟು ಸಮಯ ಕೇಂದ್ರದ ವರಿಷ್ಠರ ಸೂಚನೆ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದ ಕಾರಣ ರಾಜ್ಯದಲ್ಲಿ ಪ್ರಬಲ ನಾಯಕರ ಅಗತ್ಯ ತಲೆದೋರಿಲಿಲ್ಲ. ಆದರೆ ಈಗ ಕಾಂಗ್ರೆಸ್‌ ಸ್ಥಳೀಯ ನಾಯಕರ ವರ್ಚಸ್ಸಿನಿಂದಾಗಿಯೇ ಗೆದ್ದ ಬಳಿಕ ಬಿಜೆಪಿ ಕೂಡ ಸ್ಥಳೀಯ ನಾಯಕರನ್ನು ಬೆಳೆಸುವ ಅನಿವಾರ್ಯತೆಯಿದೆ. ಹೀಗಾಗಿ ಬಸನಗೌಡ ಪಾಟೀಲ್‌ ಯತ್ನಾಳ ಅವರಂಥ ನಾಯಕರು ಮುನ್ನೆಲೆಗೆ ಬರಲಿದ್ದಾರೆ.
ರಾಜ್ಯ ನಾಯಕತ್ವವನ್ನು ಮರುಪರಿಶೀಲಿಸಿ ಪ್ರಬಲ ಹಿಂದುತ್ವದ ಅಜೆಂಡಾವನ್ನು ಅನುಸರಿಸಲು ಬಿಜೆಪಿ ಮುಂದಾಗಿದೆ. ಚುನಾವಣೆಯಲ್ಲಿ ಮೃದು ಹಿಂದುತ್ವ ಸಿದ್ಧಾಂತ ನಿರೀಕ್ಷಿತ ರೀತಿಯಲ್ಲಿ ಪರಿಣಾಮ ಬೀರಿಲ್ಲ. ಹೀಗಾಗಿ ಪ್ರಬಲ ಹಿಂದುತ್ವವನ್ನು ಮತ್ತೆ ಮುನ್ನೆಲೆಗೆ ತಂದು ಎಲ್ಲ ಪ್ರಮುಖ ಸಮುದಾಯಗಳಿಗೆ ಸಮಾನ ಪ್ರಾಮುಖ್ಯತೆ ನೀಡಲು ಪಕ್ಷದ ಪ್ರಮುಖರು ನಿರ್ಧರಿಸಿದ್ದಾರೆ.













































































error: Content is protected !!
Scroll to Top