ಸುನೀಲ್ ಗೆಲುವು – ಗೆಲುವಿಗೆ ಕಾರಣವಾದ ಅಂಶಗಳೇನು ?
ಕಾರ್ಕಳ : ಕಾರ್ಕಳದಲ್ಲಿ ಬಿಜೆಪಿ ಮತ್ತೆ ಪಾರಮ್ಯ ಸಾಧಿಸಿದೆ. ಸುನಿಲ್ ಕುಮಾರ್ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೊದಲನೇ ಸುತ್ತುವಿನಿಂದ ಸುನಿಲ್ ಕುಮಾರ್ ಅವರೇ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಅಂತಿಮ ಸುತ್ತಿನಲ್ಲಿ ಉದಯ್ ಕುಮಾರ್ ಶೆಟ್ಟಿ -72426, ಡೇನಿಯಲ್ ಫೆಡ್ರಿಕ್ ರೇಂಜರ್-556, ಶ್ರೀಕಾಂತ ಪೂಜಾರಿ-281, ಸುನೀಲ್ ಕುಮಾರ್ -77028, ಅರುಣ್ ದೀಪಕ್ -501, ಪ್ರಮೋದ್ ಮುತಾಲಿಕ್ -4508, ಡಾ. ಮಮತಾ ಹೆಗ್ಡೆ-238, ವಿದ್ಯಾಲಕ್ಷ್ಮಿ-181, ಸುಧಾಕರ ಆಚಾರ್ಯ-233 ಮತ್ತು ನೋಟಾ -921 ಮತಬಿದ್ದಿದೆ.
ಬಿಜೆಪಿ ಗೆಲುವಿಗೆ ಪ್ರಮುಖ ಅಂಶಗಳನ್ನು ಪಟ್ಟಿ ಮಾಡೋದಾದ್ರೆ ಈ ರೀತಿ ಮಾಡಬಹುದಾಗಿದೆ. ಗ್ರಾಮಮಟ್ಟದಲ್ಲಿ ಪಕ್ಷದ ಸಂಘಟನೆ ಸದೃಢವಾಗಿರುವುದು, ಸಂಘಟನಾತ್ಮಕ ಪ್ರಚಾರ, ಸುನಿಲ್ ವಿರುದ್ಧದ ವೈಯಕ್ತಿಕ ದಾಳಿ ಅವರ ಗೆಲುವಿಗೆ ಪೂರಕವಾಗಿದೆ ಎಂದೇ ಹೇಳಬಹುದು. ಬಿಜೆಪಿಯ ಕಾರ್ಯಕರ್ತರೂ ತಾನೇ ಅಭ್ಯರ್ಥಿ ಎಂಬಂತೆ ಗೆಲುವಿಗಾಗಿ ಶಕ್ತಿಮೀರಿ ಶ್ರಮಿಸಿರುವುದು, ಕಾರ್ಕಳ ಉತ್ಸವ ಮತ್ತು ಪರಶುರಾಮ ಥೀಮ್ ಪಾರ್ಕ್ ಮೊದಲಾದ ಜನಾಕರ್ಷಣೆಯ ಕಾರ್ಯಕ್ರಮ, ಯೋಗಿ ಆದಿತ್ಯನಾಥ್ ರೋಡ್ ಶೋ, ಜಾತಿ ಮೇಲೆ ಮತವನ್ನು ಕೇಳದೆ ಹಿಂದುತ್ವಕ್ಕೆ ಅಂಟಿಕೊಂಡಿದ್ದು, ಎದುರಾಳಿಯನ್ನು ನಿರ್ಲಕ್ಷ್ಯ ಮಾಡದೆ ಸ್ವತಃ ಸುನೀಲ್ ಕುಮಾರ್ ಅವರೇ ಅಖಾಡಕ್ಕೆ ಇಳಿದು ಕೆಲಸ ಮಾಡಿದ್ದು, ಅಭಿವೃದ್ಧಿಯಲ್ಲಿ ಕಾರ್ಕಳದ ನಕ್ಷೆಯನ್ನು ಬದಲಾಯಿಸಿದ್ದು, ಬೆಂಗಳೂರು, ಮುಂಬೈ, ಪೂನಾದಲ್ಲಿ ಇರುವ ಕಾರ್ಕಳದ ಯುವಜನತೆಯನ್ನು ತಲುಪಲು ಸಾಧ್ಯವಾಗಿರುವುದು, ಕಾರ್ಯಕರ್ತರ ನಿರಂತರ ಸಭೆ, ತರಬೇತಿ, ಬೌದ್ಧಿಕ ಕಾರ್ಯಕ್ರಮ, ಹೊಸ ಮತದಾರರು ಬಿಜೆಪಿ ಬೆಂಬಲಿಸಿದ್ದು, ಮಾರಿಗುಡಿ, ಗ್ರಾಮಮಟ್ಟದಲ್ಲಿ ಹಲವು ದೈವಸ್ಥಾನ, ದೇವಸ್ಥಾನ ಅಭಿವೃದ್ದಿಯ ಕಾರ್ಯಗಳು, ಎಲ್ಲ ಜಾತಿ, ಸಮುದಾಯಗಳಿಗೆ ಸಮುದಾಯ ಭವನ ನಿರ್ಮಿಸಲು ಅನುದಾನ ಒದಗಿಸಿದ್ದು, ತನ್ನ ಮೇಲೆ ವೈಯಕ್ತಿಕ ದಾಳಿ ನಡೆದರೂ ಸುನೀಲ್ ಕುಮಾರ್ ವಿಚಲಿತರಾಗದೆ ಗಟ್ಟಿಯಾದ ನಿಂತದ್ದು, 4 ಸಾವಿರಕ್ಕಿಂತ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ಯಶಸ್ವಿಯಾಗಿದ್ದು, ಸಣ್ಣ ಸಣ್ಣ ಅಂಶಗಳನ್ನು ನಿರ್ಲಕ್ಷ್ಯ ಮಾಡದೆ ಗಂಭೀರವಾಗಿ ಪರಿಗಣಿಸಿದ್ದು, ಸ್ಟಾರ್ ಪ್ರಚಾರಕರಾಗಿ ಕ್ಷೇತ್ರದ ಹೊರಗೆ ಹೋಗದೆ ಕಾರ್ಕಳದಲ್ಲಿ ಪೂರ್ಣ ಪ್ರಮಾಣದ ಪ್ರಚಾರ ಕಾರ್ಯ ನಡೆಸಿದ್ದು ಸುನಿಲ್ ಗೆಲುವಿಗೆ ಸಹಕಾರಿಯಾಯಿತು.






































