ಕಾರ್ಕಳ : ಚುನಾವಣೆ ಸೋಲು ಬಹಳ ಬೇಸರವನ್ನುಂಟು ಮಾಡಿದೆ. ಸೋಲಿನಿಂದ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಮುಂದಿನ ದಿನಗಳಲ್ಲೂ ಉತ್ತಮ ಕಾರ್ಯಗಳನ್ನು ಮಾಡೋಣ. ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ಹೇಳಿದರು.
ಕಾರ್ಕಳದ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು ಗೆಲುವಿನ ವಿಶ್ವಾಸದಲ್ಲಿ ನಾವಿದ್ದೆವು. ಕಾರ್ಕಳದಲ್ಲಿ ಬಿಜೆಪಿಯವರು ಹಣ, ಹೆಂಡ ಹಂಚಿ ಅಡ್ಡದಾರಿಯ ಮೂಲಕ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ ದೊರೆತಿದ್ದು ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು ಕಾಯಕರ್ತರ ಮೂಲಕ ನಡೆಸಲಿದ್ದೇನೆ ಎಂದವರು ತಿಳಿಸಿದರು.
ಪ್ರಚಾರ ಸಮಿತಿಯ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಕೇವಲ ಪತ್ರಿಕೆಗಳಲ್ಲಿ ಶಾಸಕರ ಅಭಿವೃದ್ಧಿಯ ಮಾತುಗಳಿವೆ. ಕಳೆದ ಬಾರಿಗಿಂತ ಈ ಬಾರಿಯ ಜಯದ ಅಂತರ ಕಡಿಮೆಯಾಗಿದೆ. ಕ್ಷೇತ್ರದಲ್ಲಿ ಅಡ್ಡ ಮತದಾನವೂ ಆಗಿದೆ. ಇದರಿಂದ ಶಾಸಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲಲಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪುರಸಭಾ ಮಾಜಿ ಅಧ್ಯಕ್ಷ ಸುಭಿತ್ ಎನ್.ಆರ್, ಪುರಸಭಾ ಸದಸ್ಯ ಅಶ್ಫಕ್ ಅಹಮದ್, ಇನ್ನಾ ಪಂಚಾಯತ್ ಅಧ್ಯಕ್ಷ ಕುಶ ಮೂಲ್ಯ, ಗಿರೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಉದಯ ಶೆಟ್ಟಿ, ಕಾಂತಿ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕರ್ತರು ಧೃತಿಗೆಡಬೇಕಿಲ್ಲ – ನಮ್ಮದೇ ಸರಕಾರವಿದೆ : ಉದಯ ಶೆಟ್ಟಿ ಮುನಿಯಾಲು





































