ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿಯವರ ಕುಮ್ಮಕ್ಕಿನ ಮೇರೆಗೆ ಅವರ ಅನುಯಾಯಿಗಳು ಪರಸ್ಪರ ದ್ವೇಷ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ವಾತಾವರಣವನ್ನು ಕಲುಷಿತಗೊಳಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ ಚುನಾವಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ತೇಜೋವಧೆ
ಕಾಂಗ್ರೆಸಿನ ಅಭ್ಯರ್ಥಿ ಉದಯ ಶೆಟ್ಟಿಯವರ ಅನುಯಾಯಿಗಳು ತೇಜೋವಧೆ, ಪೂರ್ವಾಗ್ರಹ ಪೀಡಿತ ನಿಂದನೆಗಳಲ್ಲಿ ತೊಡಗಿರುತ್ತಾರೆ. ಬಿಜೆಪಿ ಕಾರ್ಯಕರ್ತ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಬಗ್ಗೆ ಖಾಸಗಿ ಚಾನೆಲ್ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಯವರು ಮುದ್ರಿತ ವಿಡಿಯೋ ರೆಕಾರ್ಡ್‌ನ್ನು ಹರಿಯಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ರಾಜೇಶ್ ಶೆಟ್ಟಿ ವಿಖ್ಯಾತ್ ಶೆಟ್ಟಿಯವರ ಬಗ್ಗೆ ನಿಂದನಾತ್ಮಕ ಹಾಗೂ ವೈಯಕ್ತಿಕ ತೇಜೋವಧೆ ಮಾಡಿ ಏಕವಚನದಲ್ಲಿ ಮಾತನಾಡಿರುತ್ತಾರೆ. ಅವರು ತಮ್ಮ ವೀಡಿಯೋದಲ್ಲಿ ನಿನ್ನ ತಂದೆಯ ಜೊತೆ ಕೇಳು ನಾನು ಯಾರು ಅಂತ. ಸುನಿಲ್ ಕುಮಾರ್‌ನ ಚಡ್ಡಿ ಒಗೆಯುವ ಜನ ನೀನು. ಕಾರ್ಕಳದ ದುಸ್ಥಿತಿಗೆ ನೀನೇ ಕಾರಣ ಎಂದು ತುಳು ಭಾಷೆಯಲ್ಲಿ ಬೈದು ತೇಜೋವಧೆ ಮಾಡಿದ್ದಲ್ಲದೇ ಪವರ್ ಟಿ.ವಿ.ಯ ಯೂಟ್ಯೂಬ್ ಪ್ರೋಮೋದಲ್ಲಿ ಬಿಜೆಪಿ ನಾಯಕರಿಗೆ ಮುಜುಗರವಾಗುವ ರೀತಿಯಲ್ಲಿ ವಿಡಿಯೋ ಪ್ರಸಾರ ಮಾಡಿರುತ್ತಾರೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಬೆಂಬಲಿಗನ ವೀಡಿಯೋ ಎಂದೆಲ್ಲ ಹೇಳಿ, ಶಾಸಕರ ಬೆಂಬಲಿಗನ ರಾಸಲೀಲೆ ಎಂದೆಲ್ಲ ಸುದ್ದಿ ಹಬ್ಬಿಸಿರುತ್ತಾರೆ.
ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ
ಬಿಜೆಪಿ ಕಾರ್ಯಕರ್ತನ ತೇಜೋವಧೆ ಆಗಿರುವುದು ಮಾತ್ರವಲ್ಲದೇ ಕ್ಷೇತ್ರದ ಮಹಿಳೆಯರಿಗೂ ಅಪಮಾನ ಮಾಡಿದಂತಾಗಿದೆ. ಸುಳ್ಳು ಹರಡುವಿಕೆಯ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಕಾರ್ಕಳ ಅಭ್ಯರ್ಥಿ ಉದಯ ಶೆಟ್ಟಿಯವರ ಕುಮ್ಮಕ್ಕು ಇರುವುದು ಕಂಡು ಬರುತ್ತಿದೆ. ಈ ರೀತಿಯ ಸುದ್ದಿ ಪ್ರಸಾರದಿಂದಾಗಿ ಉದಯ ಶೆಟ್ಟಿಯವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.



































