ಉಡುಪಿ : ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಪ್ರಾರಂಭವಾಗಿದೆ. ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಂತಹ ಶಕ್ತಿಪೀಠ ಇದಾಗಿದ್ದು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂಜಾ ವಿಧಿವಿಧಾನಗಳು ಏ.30ರಂದು ಬೆಳಗ್ಗೆ ದೇವಸ್ಥಾನದ ಮುಂಭಾಗದಲ್ಲಿರುವ ಕಂಬದ ಗಣಪತಿಗೆ ಪ್ರಾರ್ಥನೆ ಮತ್ತು ಗಣಹೋಮವನ್ನ ನಡೆಸುವುದರ ಮೂಲಕ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂಜಾ ಕೈಂಕರ್ಯಗಳನ್ನ ಪ್ರಾರಂಭಿಸಲಾಯಿತು.
ಬಿಳಿ ಹಾಗೂ ಗುಲಾಬಿ ಬಣ್ಣದ ಸೇವಂತಿಗೆ, ಕಮಲ, ಅರಶಿನ ಬಣ್ಣದ ಚೆಂಡು ಹೂವಿನಿಂದ ಕಂಬದ ಗಣಪತಿಯನ್ನ ಅಲಂಕರಿಸಲಾಗಿದ್ದು, ಜೊತೆಗೆ ದಿನನಿತ್ಯ ನಡೆಸುವಂತಹ ಬಲಿ ಉತ್ಸವದ ಜರುಗಿತು. ಉಡುಪಿಯ ಶ್ರೀ ಮೂಕಾಂಬಿಕಾ ಭಜನಾ ಮಂದಿರ ಸಮಿತಿ ವತಿಯಿಂದ ಬಂದಂತಹ ಮೊದಲ ಹೊರಕಾಣಿಕೆಯನ್ನ ಸ್ವೀಕರಿಸಿಕೊಂಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಹೊರೆಕಾಣಿಕೆ ಪೂಜೆಯನ್ನ ನೆರವೇರಿಸಿದರು. ಹೊರಕಾಣಿಕೆ ಉಗ್ರಾಣದಲ್ಲಿ ಅರ್ಚಕರು ಪೂಜಾ ವಿಧಿವಿಧಾನವನ್ನ ನೆರವೇರಿಸಿ ಅಷ್ಟಬಂಧ ಹೊರೆಕಾಣಿಕೆ ಉಗ್ರಾಣದ ಉದ್ಘಾಟನೆಯನ್ನ ವಿದ್ಯುಕ್ತವಾಗಿ ನೆರವೇರಿಸಿದರು. ರಾತ್ರಿ ವೇಳೆ ಯಾಗಶಾಲಾ ಪ್ರವೇಶ, ಮಂಟಪ ಸಂಸ್ಕಾರ, ವಾಸ್ತುಹೋಮ, ರಾಕ್ಷೋಘ್ನಹೋಮ, ಕಲಶಸ್ಥಾಪನೆ, ಅಸ್ತ್ರಯಾಗ, ಅಗ್ನಿಜನನ ಅಧಿವಾಸ ಹೋಮಗಳನ್ನ ನೆರವೇರಿಸಲಾಗುತ್ತದೆ.
ಅಷ್ಟಬಂಧ ಬ್ರಹ್ಮಕಲಶೋತ್ಸವದ ಜೊತೆ ಜೊತೆಗೆ ದೇವಸ್ಥಾನದಲ್ಲಿ ಮೇ11ನೇ ತಾರೀಕಿನವರೆಗೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ. ಪ್ರಮುಖವಾಗಿ ಮೇ4ಕ್ಕೆ ಸಹಸ್ರ ಕಲಶಸ್ಥಾಪನೆ, ಮೇ5 ರಂದು ಸಹಸ್ರ ಕಲಶದೊಂದಿಗೆ ಬ್ರಹ್ಮ ಕಲಶಾಭಿಷೇಕ, ಮೇ6 ಮತ್ತು 7ರಂದು ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೇ9ರಂದು ಮನ್ಮಹಾ ರಥೋತ್ಸವ ಜರುಗಲಿದೆ.

ಭಕ್ತಾದಿಗಳೆಲ್ಲರೂ ಆಗಮಿಸಿ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿ ಪ್ರಸಾದವನ್ನ ಸ್ವೀಕರಿಸಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಮನವಿ ಮಾಡಿದ್ದಾರೆ.









































