ಮತ್ಸ್ಯಗಂಧ ಎಂಬ ಮತ್ಸ್ಯಕನ್ಯೆಗೆ 25ರ ಹರೆಯ

ಮುಂಬಯಿ-ಕರಾವಳಿ ನಡುವಿನ ಸಂಪರ್ಕ ಸೇತುಗೆ ಬೆಳ್ಳಿಹಬ್ಬದ ಸಂಭ್ರಮ

ಉಡುಪಿ: ಮಂಗಳೂರು ಹಾಗೂ ಮುಂಬಯಿ ಮಧ್ಯೆ ಓಡಾಡುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಬೆಳ್ಳಿಹಬ್ಬದ ಸಂಭ್ರಮ. 1998ರ ಮೇ 1ರಂದು ಮೊದಲ ದಿನದ ಓಡಾಟ ಆರಂಭಿಸಿದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು 2023ರ ಮೇ 1ಕ್ಕೆ ಸಂಚಾರವನ್ನು ಆರಂಭಿಸಿ 25 ವರ್ಷ ಪೂರ್ಣಗೊಳ್ಳಲಿದೆ. ಕರಾವಳಿ ಕನ್ನಡಿಗರಿಗೆ ಮುಂಬಯಿ ಯಾನವನ್ನು ಅಪ್ಯಾಯಮಾನವಾಗಿಸಿದ ಮತ್ಸ್ಯಗಂಧ ರೈಲು ಜನಮಾನಸದಲ್ಲಿ ವಿಶಿಷ್ಟವಾದ ಸ್ಥಾನ ಪಡೆದುಕೊಂಡಿದೆ.

ನಮ್ಮ ರೈಲು ಎಂಬ ಪ್ರೀತಿ

ಈಗ ಕೊಂಕಣ ರೈಲು ಮಾರ್ಗದಲ್ಲಿ ನೂರಾರು ರೈಲುಗಳು ಓಡುತ್ತಿರಬಹುದು. ಅದರೆ ಕರಾವಳಿಯ ಕನ್ನಡಿಗರಿಗೆ ಮತ್ಸ್ಯಗಂಧ ಮಾತ್ರ ನಮ್ಮ ರೈಲು ಎಂಬ ಭಾವನೆಯಿದೆ. ಕೊಂಕಣ ರೈಲು ಮಾರ್ಗ ನಿರ್ಮಾಣವಾಗುವುದಕ್ಕೂ ಮೊದಲು ಕರಾವಳಿಯಿಂದ ಮುಂಬಯಿ ಪ್ರಯಾಣಿಸಬೇಕಾದರೆ ಬಸ್‌ ಮಾತ್ರ ಗತಿಯಾಗಿತ್ತು. ವಿಮಾನ ಪ್ರಯಾಣ ಭಾರಿ ಶ್ರೀಮಂತರಿಗೆ ಮಾತ್ರ ಕೈಗೆಟಕುವ ಕಾಲವದು. ಆ ದಿನಗಳಲ್ಲಿ ಮುಂಬಯಿ ಮತ್ತು ಮಂಗಳೂರು ನಡುವೆ ಖಾಸಗಿ ಬಸ್‌ಗಳದ್ದೇ ದರ್ಬಾರ್‌. ಆ ದಿನಗಳಲ್ಲಿ ಖಾಸಗಿ ಬಸ್‌ಗಳು ಧಾರಾಳವಾಗಿ ಓಡಾಡುತ್ತಿದ್ದರೂ ಬಸ್‌ನವರ ಅಟ್ಟಹಾಸ ಮಾತ್ರ ವಿಪರೀತವಾಗಿತ್ತು. ಅವರ ಮರ್ಜಿಗೆ ತಕ್ಕಂತೆ ಜನರು ಪ್ರಯಾಣಿಸಬೇಕಿತ್ತು. ಸೀಟು ಕಾದಿರಿಸಿದ್ದರೂ ಬೇರೆ ಯಾರಿಗಾದರೂ ಕೊಡುವುದು, ಸಮಯಕ್ಕೆ ಸರಿಯಾಗಿ ಬಸ್‌ ಓಡಿಸದಿರುವುದು, ಊಟ-ತಿಂಡಿಗೆ ಕಚಡಾ ಹೋಟೆಲ್‌ಗಳ ಮುಂದೆ ಬಸ್‌ ನಿಲ್ಲಿಸುವುದು ಈ ಮುಂತಾದ ವರ್ತನೆಗಳಿಂದ ಜನ ರೋಸಿ ಹೋಗಿದ್ದರೂ ಅನಿವಾರ್ಯವಾಗಿ ಜನ ಈ ಅನ್ಯಾಯಗಳನ್ನೆಲ್ಲ ಸಹಿಸಿ ಪ್ರಯಾಣಿಸಬೇಕಾಗಿತ್ತು.

ಪ್ರಯಾಣದ ಹೊಸ ಅನುಭವ

ಇಂಥ ಕಾಲದಲ್ಲಿ ಮತ್ಸ್ಯಗಂಧ ರೈಲು ಪ್ರಾರಂಭವಾದಾಗ ಜನರಿಗೆ ಪ್ರಯಾಣದ ಹೊಸ ಅನುಭವ ಸಿಕ್ಕಿತು. ಕಿರಿಕಿರಿಯಿಲ್ಲದ ಸ್ವತಂತ್ರವಾಗಿ ಪ್ರಯಾಣಿಸುವ, ಮನೆಯಿಂದಲೇ ಒಯ್ದ ಊಟ-ತಿಂಡಿ ಸವಿಯುವ, ಬೇಕಾದಾಗಲೆಲ್ಲ ಟೀ,ಕಾಫಿ, ತಿಂಡಿ ಸರಬರಾಜು ಆಗುವ ಈ ಪ್ರಯಾಣಕ್ಕೆ ಜನ ಬೇಗನೆ ಹೊಂದಿಕೊಂಡರು. ಊರಿಗೆ ಹೋಗುವುದೆಂದರೆ ಮತ್ಸ್ಯಗಂಧ ರೈಲು ಎಂಬ ಭಾವನೆ ಮುಂಬಯಿ ಕನ್ನಡಿಗರಲ್ಲಿ ಮೂಡಿತು.

ಸ್ವಾರಸ್ಯಕರ ಘಟನೆಗಳ ಮೂಟೆ ಬಿಚ್ಚಿದಾಗ

ಮತ್ಸ್ಯಗಂಧ ರೈಲಿನ ಪ್ರಯಾಣದ ಸಾವಿರಾರು ಸ್ವಾರಸ್ಯಕರ ಅನುಭವಗಳು ಜನರ ಬಳಿಯಿವೆ. ಯಾವ ಪ್ರಯಾಣಿಕನನ್ನು ಮಾತನಾಡಿದರೂ ಒಂದೊಂದು ಅನುಭವದ ಮೂಟೆ ಬಿಚ್ಚುತ್ತಾರೆ. ಪ್ರತಿ ಪ್ರಯಾಣದಲ್ಲೂ ಒಂದಷ್ಟು ಹೊಸ ಜನರ ಪರಿಚಯವಂತೂ ಆಗಿಯೇ ಆಗುತ್ತದೆ. ವೈವಾಹಿಕ ಸಂಬಂಧಗಳು ಈ ಪ್ರಯಾಣದಲ್ಲಿ ಕುದುರಿದ ಉದಾಹರಣೆಗಳಿವೆ. ವ್ಯಾಪಾರ, ವಹಿವಾಟುಗಳ ಮಾತುಕತೆಗೆ ಮತ್ಸ್ಯಗಂಧ ರೈಲು ಪ್ರಯಾಣವೇ ವೇದಿಕೆಯಾದದ್ದೂ ಇದೆ. ಹೀಗೆ ಮತ್ಸ್ಯಗಂಧ ಎಂಬುದು ಕರಾವಳಿ ಕನ್ನಡಿಗರ ಜೀವನಾಡಿಯೇ ಅಗಿಹೋಗಿದೆ.

















































error: Content is protected !!
Scroll to Top