ಇಂದು ಬಿಜೆಪಿ, ನಾಳೆ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

ಕೊಡುಗೆಗಳ ಮೇಲಿದೆ ಭಾರಿ ನಿರೀಕ್ಷೆ

ಬೆಂಗಳೂರು: ಚುನಾವಣಾ ಕಣದಲ್ಲಿ ಅಬ್ಬರಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಇದೀಗ ಪ್ರಣಾಳಿಕೆ ಬಿಡುಗಡೆಗೆ ತಯಾರಿ ಮಾಡುತ್ತಿವೆ. ಬಿಜೆಪಿ ಪ್ರಣಾಳಿಕೆ ಸೋಮವಾರ ಮತ್ತು ಕಾಂಗ್ರೆಸ್‌ ಪ್ರಣಾಳಿಕೆ ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆಯಿದೆ.
ಬಿಜೆಪಿ ಪ್ರಣಾಳಿಕೆಗಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆದುಕೊಂಡಿದೆ. ಈ ಆಂಶಗಳ್ನು ಸೇರಿಸಿಕೊಂಡು ಕಾಂಗ್ರೆಸ್‌ನ ಉಚಿತ ಕೊಡುಗೆಗಳನ್ನು ಕೌಂಟರ್‌ ಮಾಡಲು ಬಿಜೆಪಿ ಯಾವ ರೀತಿಯ ಭರವಸೆಗಳನ್ನು ನೀಡಲಿದೆ ಎಂಬ ಕುತೂಹಲವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಣಾಳಿಕೆ ಯುವಜನರ ಕಲ್ಯಾಣ ಕ್ರಮಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕರಿಸಬಹುದು ಎನ್ನಲಾಗಿದೆ. ಇದಲ್ಲದೆ ಮೊದಲ ಬಾರಿಯ ಮತದಾರರ ಮನಗೆಲ್ಲಲು 12ನೇ ತರಗತಿಯಲ್ಲಿ ಉತ್ತೀರ್ಣರಾದ ಯುವಕರು ಮತ್ತು ವಿದ್ಯಾರ್ಥಿನಿಯರಿಗೆ ವಿಶೇಷ ಘೋಷಣೆ ಹೊರಬೀಳಬಹುದು ಎನ್ನಲಾಗಿದೆ.
2018 ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಸಮಾಜದ ಪ್ರತಿಯೊಂದು ವರ್ಗವನ್ನು ಮುಟ್ಟಿದೆ. ಗೋ ಸಂರಕ್ಷಣಾ ಕ್ರಮಗಳನ್ನೂ ಪ್ರಣಾಳಿಕೆಯಲ್ಲಿ ಪಕ್ಷ ಸೇರಿಸಿತ್ತು.

ಕಾಂಗ್ರೆಸ್‌ನಿಂದ ಇನ್ನಷ್ಟು ಉಚಿತ ಕೊಡುಗೆಗಳ ನಿರೀಕ್ಷೆ

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿ ಮಾಡಲು ಈಗಾಗಲೇ ‘ಐದು ಗ್ಯಾರಂಟಿ’ಗಳನ್ನು ಘೋಷಿಸಿರುವ ಕಾಂಗ್ರೆಸ್‌ ಪ ಕ್ಷ ಇನ್ನೂ ಹತ್ತು ಹಲವು ಭರವಸೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಈಗಾಗಲೇ ಪ್ರಣಾಳಿಕೆ ಅಂತಿಮಗೊಂಡಿದ್ದು, ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ವಾಗ್ದಾನಗಳ ಪಟ್ಟಿಬಿಡುಗಡೆಗೊಳ್ಳಲಿದೆ.
ಮೂಲಗಳ ಪ್ರಕಾರ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶ ಹಾಗೂ ಬೆಂಗಳೂರು ನಗರಗಳಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲಾಗುವುದು. ಜನವರಿಯಲ್ಲೇ ಕರಾವಳಿ ಕರ್ನಾಟಕಕ್ಕೆ 10 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದೇ ರೀತಿಯಲ್ಲಿ ಬೇರೆ ವಿಭಾಗಗಳಿಗೂ ಪ್ರದೇಶವಾರು ಕಾರ್ಯಕ್ರಮ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ.
ಈಗಾಗಲೇ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’, ಪ್ರತಿ ಮನೆಯೊಡತಿಗೆ 2 ಸಾವಿರ ರೂ. ಮಾಸಿಕ ಸಹಾಯ ಧನ ನೀಡುವ ‘ಗೃಹ ಲಕ್ಷ್ಮೀ’, ಪದವೀಧರರಿಗೆ 3 ಸಾವಿರ ರೂ. ಹಾಗೂ ಡಿಪ್ಲೊಮ ಪದವೀಧರರಿಗೆ 1,500 ರೂ.ಮಾಸಿಕ ನಿರುದ್ಯೋಗ ಭತ್ಯೆ ನೀಡುವ ‘ಯುವ ನಿಧಿ’, ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವ ‘ಅನ್ನಭಾಗ್ಯ’, ಮಹಿಳೆಯರಿಗೆ ಉಚಿತ ಪ್ರಯಾಣದ ‘ಸಖಿ’ ಭರವಸೆ ಸೇರಿದಂತೆ ಐದು ಗ್ಯಾರಂಟಿ ಯೋಜನೆ ಪ್ರಕಟಿಸಲಾಗಿದೆ.
ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಂಗನವಾಡಿ ಕಾರ್ಯಕರ್ತೆಯರ ಸಹಾಯಧನ 15 ಸಾವಿರ ರೂ., ಅಂಗನವಾಡಿ ಸಹಾಯಕಿಯರ ಸಹಾಯಧನ 10 ಸಾವಿರ ರೂ., ಆಶಾ ಕಾರ್ಯಕರ್ತೆಯರ ಗೌರವ ಧನ 8 ಸಾವಿರ ರೂ., ಬಿಸಿಯೂಟ ಅಡುಗೆ ಸಹಾಯಕರ ಗೌರವ ಧನ 5 ಸಾವಿರ ಋೂ.ಗೆ ಹೆಚ್ಚಳ ಮಾಡುವ ಭರವಸೆ ನೀಡಿದ್ದಾರೆ.
ಇವುಗಳ ಜತೆಯಲ್ಲಿ ಪೌರಕಾರ್ಮಿಕರ ಹುದ್ದೆ ಕಾಯಂ, ಹಳೆ ಪಿಂಚಣಿ ಮರು ಜಾರಿ ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಕಾಂಗ್ರೆಸ್‌ ಪ್ರಣಾಳಿಕೆ ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ.







































































error: Content is protected !!
Scroll to Top