ಚಿತ್ರ ಬಿಡುಗಡೆ ತಡೆಯಲು ಸರಕಾರಕ್ಕೆ ಒತ್ತಾಯ
ತಿರುವನಂತಪುರಂ: ಲವ್ ಜಿಹಾದ್ ಮೂಲಕ ಅನ್ಯ ಧರ್ಮದ ಯುವತಿಯರನ್ನು ಮತಾಂತರಗೊಳಿಸಿ ಭಯೋತ್ಪಾದಕ ಸಂಘಟನೆಗಳಿಗೆ ಮಾರಾಟ ಮಾಡುವ ಕೇರಳದ ನೈಜ ಕತೆಯನ್ನು ಒಳಗೊಂಡಿರುವ ದಿ ಕೇರಳ ಸ್ಟೋರಿ ಚಿತ್ರವನ್ನು ತಡೆಹಿಡಿಯಲು ಕಾಂಗ್ರೆಸ್ ಹೋರಾಡುತ್ತಿದೆ. ಸುಳ್ಳು ಕಥೆಯ ಮೂಲಕ ಸಮಾಜದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ಉದ್ದೇಶ ಹೊಂದಿರುವ ಚಿತ್ರ ‘ದಿ ಕೇರಳ ಸ್ಟೋರಿ’ಯನ್ನು ಪ್ರದರ್ಶಿಸಲು ಅನುಮತಿ ನೀಡದಂತೆ ಕಾಂಗ್ರೆಸ್ ಶುಕ್ರವಾರ ಸರ್ಕಾರವನ್ನು ಒತ್ತಾಯಿಸಿದೆ.
ಸುದೀಪ್ತೋ ಸೇನ್ ಬರೆದು ನಿರ್ದೇಶಿಸಿದ ‘ದಿ ಕೇರಳ ಸ್ಟೋರಿ’ ದಕ್ಷಿಣದ ರಾಜ್ಯದಲ್ಲಿ ಕಾಣೆಯಾಗಿದ್ದ ಸುಮಾರು 32 ಸಾವಿರ ಮಹಿಳೆಯರ ಬದುಕಿನ ಘಟನೆಗಳ ಕುರಿತು ಹೇಳುತ್ತದೆ.
ಚಲನಚಿತ್ರದ ಉದ್ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರತಿಷ್ಠೆಯನ್ನು ಹಾಳು ಮಾಡುವುದಾಗಿದೆ ಎಂದು ಕೇರಳದ ವಿರೋಧ ಪಕ್ಷ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಆರೋಪಿಸಿದ್ದಾರೆ. ಕೇರಳದಲ್ಲಿ 32 ಸಾವಿರ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಮತ್ತು ಅವರು ಐಸಿಸ್ ಸದಸ್ಯರಾಗಿದ್ದಾರೆ ಎಂದು ಸುಳ್ಳು ಹೇಳುವ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಅದಾ ಶರ್ಮಾ ಅಭಿನಯಿಸಿರುವ ದಿ ಕೇರಳ ಸ್ಟೋರಿ ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಯಲ್ಲ. ಅಲ್ಪಸಂಖ್ಯಾತರ ಮೇಲೆ ಧಿಕ್ಕಾರ ಹೇರಿರುವ ಸಮಾಜದಲ್ಲಿ ಒಡಕು ಮೂಡಿಸುವ ಸಂಘ ಪರಿವಾರದ ಅಜೆಂಡಾವನ್ನು ಜಾರಿಗೆ ತರುವ ಪ್ರಯತ್ನದ ಭಾಗವಾಗಿದೆ. ಕೋಮುವಾದದ ವಿಷವನ್ನು ಉಗುಳುವ ಮೂಲಕ ಕೇರಳವನ್ನು ವಿಭಜಿಸಬಹುದು ಎಂದು ಯಾರೂ ಭಾವಿಸಬಾರದು. ಧಾರ್ಮಿಕ ವೈಷಮ್ಯವನ್ನು ಬೆಳೆಸುವ ಉದ್ದೇಶಪೂರ್ವಕ ಕ್ರಮದ ವಿರುದ್ಧ ರಾಜ್ಯವು ಅದರ ಸಂಪ್ರದಾಯದಂತೆ ಒಗ್ಗಟ್ಟಾಗಿ ನಿಲ್ಲುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಆಡಳಿತಾರೂಢ ಸಿಪಿಐ(ಎಂ)ನ ಯುವ ಘಟಕ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಕೂಡ ಚಿತ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅದರ ಟ್ರೈಲರ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದೆ.


































