ಬೆಂಗಳೂರು : ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿರುವ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಪಕ್ಷ ಯಾವಾಗಲೂ ಬದಲಾವಣೆಯಲ್ಲಿ ನಂಬಿಕೆ ಹೊಂದಿದೆ. ಪಕ್ಷ ಒಂದು ನಿರ್ಧಾರ ಕೈಗೊಳ್ಳಬೇಕಾದರೆ ಅಲ್ಲಿ ಹಲವು ಅಂಶಗಳಿರುತ್ತವೆ. ಟಿಕೆಟ್ ನಿರಾಕರಿಸಿದ ಮಾತ್ರಕ್ಕೆ ಅವರು ಕಳಂಕಿತರು ಎಂಬುದು ಅರ್ಥವಲ್ಲ. ಪಕ್ಷದ ಎಲ್ಲಾ ನಾಯಕರೂ ಗೌರವಕ್ಕೆ ಅರ್ಹರು. ಟಿಕೆಟ್ ಯಾವ ಕಾರಣಕ್ಕಾಗಿ ಕೊಟ್ಟಿಲ್ಲ ಎಂಬುದನ್ನು ಟಿಕೆಟ್ ವಂಚಿತರೊಂದಿಗೇ ನಾವು ಮಾತನಾಡಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇಂಡಿಯಾ ಟುಡೆ ಕರ್ನಾಟಕ ರೌಂಡ್ ಟೇಬಲ್ 2023 ಕಾರ್ಯಕ್ರಮದಲ್ಲಿ ಮಾತನಾಡಿದ ಶಾ ಈ ವಿಚಾರವನ್ನು ತಿಳಿಸಿದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಭಾವಿಸಿದ್ದರೆ, ಕನಿಷ್ಠ ಅವರು ಸ್ವತಂತ್ರವಾಗಿ ಗೆಲ್ಲುವುದಿಲ್ಲ ಎಂಬುದು ಅರ್ಥ ಮಾಡಿಕೊಂಡು ಒಪ್ಪಿಕೊಂಡಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳೆಬೇಕೆಂದರೆ ಜಗದೀಶ್ ಶೆಟ್ಟರ್ ನಮ್ಮ ಓಟ್ ಬ್ಯಾಂಕ್ ಅಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ.
























