ಯಾವ ಕಾರಣಕ್ಕೂ ನಿರ್ಧಾರ ಬದಲಾಗುವುದಿಲ್ಲ ಎಂಬ ಸಂದೇಶ
ಬೆಂಗಳೂರು : ಟಿಕೆಟ್ ಸಿಗದ ನಿರಾಶೆಯಲ್ಲಿ ಬಂಡೆದ್ದವರಿಗೆ ಯಾವ ಕಾರಣಕ್ಕೂ ಮಣಿಯಬಾರದು ಎಂದು ರಾಜ್ಯದ ನಾಯಕರಿಗೆ ಬಿಜೆಪಿ ಕೇಂದ್ರ ನಾಯಕತ್ವ ಸ್ಪಷ್ಟ ಸೂಚನೆ ನೀಡಿದೆ. ಬಂಡಾಯ ಏಳುವವರ ಮನವೊಲಿಸಿ, ಆದರೆ ಯಾವ ಕಾರಣಕ್ಕೂ ಅವರ ಒತ್ತಡಕ್ಕೆ ಮಣಿಯಬೇಡಿ. ಪಕ್ಷ ಕೈಗೊಂಡ ನಿರ್ಧಾರ ಅಚಲ, ಇದರಲ್ಲಿ ಒತ್ತಡಕ್ಕೆ ಮಣಿದು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ.
ಹಿರಿಯರಾದ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಬಂಡಾಯ ಎದ್ದಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಈ ಸೂಚನೆ ಬಂದಿದೆ. ಒತ್ತಡಕ್ಕೆ ಮಣಿದು ನಿರ್ಧಾರ ಬದಲಿಸಿದರೆ ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಮನವೊಲಿಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ಆದರೆ ಅವರು ಹಠ ಹಿಡಿದರೆ ಅವರ ಪಾಡಿಗೆ ಬಿಟ್ಟುಬಿಡಿ. ಇದರಿಂದಾಗುವ ನಷ್ಟವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯ ಪಕ್ಷಕ್ಕೆ ಇದೆ ಎಂಬುದಾಗಿ ಖುದ್ದು ಅಮಿತ್ ಶಾ ಅವರೇ ಹೇಳಿದ್ದಾರೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ.
ಲಕ್ಷ್ಮಣ ಸವದಿ ಅಥಣಿಯ ಟಿಕೆಟ್ ಸಿಗದೆ ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ಕೂಡ ಸಿಕ್ಕಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಶೆಟ್ಟರ್ ಅವರಿಗೂ ಕಾಂಗ್ರೆಸ್ ಕೆಂಪು ಕಂಬಳಿ ಹಾಸಿದೆ. ಸ್ವತಹ ಸಿದ್ದರಾಮಯ್ಯನವರೇ ಶೆಟ್ಟರ್ ಅವರನ್ನು ಕಾಂಗ್ರಸಿಗೆ ಆಹ್ವಾನಿಸಿದ್ದಾರೆ.
ಶೆಟ್ಟರ್ ಆರು ಸಲ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆಗೂ ಏರಿದ್ದಾರೆ. ಹೀಗಿದ್ದರೂ ಈ ಸಲ ಮತ್ತೆ ಸ್ಪರ್ಧಿಸಲು ಅವಕಾಶ ಕೊಡಬೇಕೆಂದು ಹಠ ಹಿಡಿದಿದ್ದಾರೆ. ಸವದಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಅವರನ್ನು ಎಂಎಲ್‌ಸಿ ಮಾಡಿ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಅವರು ಕೂಡ ಅಥಣಿಯಿಂದ ಟಿಕೆಟ್ ಬಯಸಿದ್ದರು.
ಬಿಜೆಪಿ ಇನ್ನೂ ಹಲವು ಹಾಲಿ ಶಾಸಕ, ಸಚಿವರಿಗೆ ಟಿಕೆಟ್ ನೀಡಿಲ್ಲ. ಆದರೆ ಹೆಚ್ಚಿನವರು ಆರಂಭದಲ್ಲಿ ತುಸು ಗಲಾಟೆ ಮಾಡಿದರೂ ಬಳಿಕ ಮೆತ್ತಗಾಗಿದ್ದಾರೆ. ಆದರೆ ಲಿಂಗಾಯತ ಸಮುದಾಯದ ಸವದಿ ಮತ್ತು ಶೆಟ್ಟರ್ ಮಾತ್ರ ಹಠ ಹಿಡಿದಿದ್ದಾರೆ. ಇವರ ನಿರ್ಗಮನದಿಂದ ಬಿಜೆಪಿಗೆ ತುಸು ಹಾನಿಯಾಗುವ ಸಾಧ್ಯತೆಯಿದ್ದರೂ ಅದನ್ನು ಸರಿಪಡಿಸುವ ವಿಶ್ವಾಸ ಕೇಂದ್ರದ ನಾಯಕರಿಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಬಂಡಾಯ ಶಮನಕ್ಕೆಂದೇ ನಿಯೋಜಿಸಲಾಗಿದೆ.
























