ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವ್ಯವಹಾರ ಅಧ್ಯಯನ ಅಧ್ಯಾಪಕರ ಸಂಘದ ಸಹಯೋಗದೊಂದಿಗೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಇ.ಪಿ. ಬಿಬಿಎ ನಾಲ್ಕನೇ ಚತುರ್ಮಾಸ ಪಠ್ಯಕ್ರಮ ಕುರಿತು ಎ. 1ರಂದು ಕಾರ್ಯಾಗಾರ ನಡೆಯಿತು.
ಜೆ.ಕೆ.ಎಸ್.ಎಚ್.ಐ.ಎಂ.ನ ಸಂಶೋಧನಾ ಪ್ರಾಧ್ಯಾಪಕ ಡಾ. ಟಿ. ಮಲ್ಲಿಕಾರ್ಜುನಪ್ಪ ಕಾರ್ಯಾಗಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸೈದ್ದಾಂತಿಕ ಚಿಂತನೆಗಳಿಗಿಂತ ಹೆಚ್ಚು ಪ್ರಾಯೋಗಿಕ ಜ್ಞಾನವನ್ನು ಒದಗಿಸುವಲ್ಲಿ ಅಧ್ಯಾಪಕರು ಕಾರ್ಯಪ್ರವೃತ್ತರಾಗಬೇಕು. ಇಂದಿನ ಯುವ ಮನಸ್ಸುಗಳೊಂದಿಗೆ ನಮ್ಮ ಜ್ಞಾನವನ್ನು ಹಂಚಿಕೊಳ್ಳಲು ಹೆಚ್ಚು ಉತ್ಸಾಹವನ್ನು ಹೊಂದಿರಬೇಕು. ಇಂತಹ ಕಾರ್ಯಾಗಾರಗಳು ಈ ನಿಟ್ಟಿನಲ್ಲಿ ಪ್ರಯೋಜನಕಾರಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಎಂ.ಎ.ಎಂ.ಐ.ಟಿ. ಯ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್, ಕೊರೊನ ಕರಿಛಾಯೆ ಬಳಿಕ ಶಿಕ್ಷಣ ಕ್ಷೇತ್ರವೂ ಬಿಕ್ಕಟ್ಟು ಎದುರಿಸುವಂತಾಗಿದೆ. ಅಧ್ಯಾಪಕರು ಮೊದಲಿಗಿಂತ ಹೆಚ್ಚು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಇಂತಹ ಕಾರ್ಯಾಗಾರಗಳು ಬೋಧಕರ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಪೂರಕವಾಗಲಿದೆ ಎಂದರು. ಕಾರ್ಯಾಗಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ 130 ಬೋಧಕರು ಭಾಗವಹಿಸಿದ್ದರು. ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಕುಮಾರಿ ಬಿ.ಕೆ. ಸ್ವಾಗತಿಸಿ, ಇಂಗ್ಲೀಷ್ ವಿಭಾಗದ ಅಧ್ಯಾಪಕಿ ಪ್ರಿಯಾಂಕ ಶಿರ್ವ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರ ಸಂಘದ ಸಹಕಾರ್ಯದರ್ಶಿ ಸಂಧ್ಯಾ ಭಂಡಾರಿ ವಂದಿಸಿದರು.






















