ಕಾಂಗ್ರೆಸ್ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್ ಬಿಜೆಪಿ ಸರಕಾರದ ದುರಾಡಳಿತದಿಂದ ಉಂಟಾದ ರಾಜ್ಯದ ಸಂತೃಸ್ತ ಸಮಾಜಕ್ಕೆ ಸ್ವಾವಲಂಬಿ ಬದುಕಿನ ಭದ್ರ ಬುನಾದಿಯನ್ನು ಹಾಕಲಿದೆ. ಚುನಾವಣಾ ದಿನಗಳಲ್ಲಿ ಇದಕ್ಕೆ ಬರುತ್ತಿರುವ ಪೂರಕ ಜನಸ್ಪಂದನೆಯನ್ನು ಕಂಡು ಸೋಲಿನ ಭಯದಲ್ಲಿ ಹತಾಶರಾಗಿ ಬಿಜೆಪಿ ನಾಯಕರು ಮನೋ ವಿಕಲ್ಪಿತರಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಇತ್ತೀಚೆಗೆ ಜಿಲ್ಲಾ ಬಿಜೆಪಿ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಿಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸುಮಾರು 3.15 ಲಕ್ಷ ಕೋಟಿಯ ರಾಜ್ಯ ಬಜೆಟ್‌ನಲ್ಲಿ ಕಾಂಗ್ರೆಸ್ ನೀಡುತ್ತಿರುವ ಈ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ಬೇಕಿರುವ ಹಣ ಸುಮಾರು 26 ರಿಂದ 30 ಸಾವಿರ ಕೋಟಿ. ಬಜೆಟ್‌ನಲ್ಲಿ ಭಾವನಾತ್ಮಕ ವಿಚಾರ ಯೋಜನೆಗಳ ಮೇಲಿನ ಅನಗತ್ಯ ವೆಚ್ಚ, 40 ಪರ್ಸೆಂಟ್ ಕಮಿಷನ್ ದಂದೆಯಿಂದ ರಾಜ್ಯದ ಖಜಾನೆಗೆ ಆಗುತ್ತಿರುವ ನಷ್ಟ ಹಾಗು ಬಜೆಟ್ ಹಣ ಸೋರಿಕೆಯನ್ನು ತಹಬಂದಿಗೆ ತಂದಾಗ ಸಹಜವಾಗಿಯೇ ಈ ಉಳಿಕೆ ಹಣದಿಂದ ಇಂತಹ ಇನ್ನೂ ಹತ್ತು ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ. ಮುಂದಿನ ದಿನಗಳಲ್ಲಿ ಇದನ್ನು ಕಾಂಗ್ರೆಸ್ ಮಾಡಿಯೇ ಮಾಡುತ್ತದೆ. ಬಹುಶ ಭ್ರಷ್ಟಾಚಾರವನ್ನು ಹೊದ್ದು ಮಲಗಿರುವ ಬಿಜೆಪಿಯ ನಾಯಕರಿಗೆ ಇದು ಅರ್ಥವಾಗುವುದಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ ಎಂದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯ ಆಹಾರ ಭದ್ರತಾ ಕಾಯ್ದೆಯನ್ನು 2011ರಿಂದ 2013ರ ವರೆಗೆ ಪಾರ್ಲಿಮೆಂಟಿನಲ್ಲಿ ಪಾಸ್ ಆಗದಂತೆ ನೋಡಿಕೊಂಡ ಬಿಜೆಪಿಗೆ ಅನ್ನಭಾಗ್ಯ ಯೋಜನೆಯ ಬಗ್ಗೆ ಮಾತಾಡುವ ನೈತಿಕತೆ ಇದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅನ್ನಭಾಗ್ಯದ ಅಕ್ಕಿಯ ಮೇಲೆ ಜಿಎಸ್ಟಿ ಹೇರಿಕೆ ಆಳುವ ಸರಕಾರದ ಅಮಾನುಷ ನಿಲುವಿಗೆ ಸಾಕ್ಷಿ. ಕಾಂಗ್ರೆಸ್ ಆಡಳಿತಾವದಿಯ ನರೇಗಾ ಯೋಜನೆಯನ್ನು ದೇಶ್ ಮರೇಗಾ ಎಂದು ಟೀಕಿಸಿದವರಿಗೆ ಪ್ರಜಾತಂತ್ರ ವ್ಯವಸ್ಥೆಯೊಳಗಿನ ಮಾನವೀಯ ಮೌಲ್ಯಗಳು ಅರ್ಥ ಆಗಲು ಸಾಧ್ಯವಿಲ್ಲ ಎಂದು ಬಿಪಿನ್ ಚಂದ್ರ ಪಾಲ್ ಪ್ರಕಟನೆಯಲ್ಲಿ ಹೇಳಿದ್ದಾರೆ.










































