ಕಾರ್ಕಳ : ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮನೆ ದುರಸ್ತಿಗೆ ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಅಸಮಾಧಾನ ಪುರಸಭಾ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಗಿದೆ.
ಮಾ. 20ರಂದು ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ನಳಿನಿ ಆಚಾರ್ಯ ನನ್ನ ವಾರ್ಡ್‌ನಲ್ಲಿ ಕೇವಲ ಎರಡು ಮನೆಗಳನ್ನು ಆಯ್ಕೆ ಮಾಡಲಾಗಿದೆ. ಮೂರು ಮನೆಗಳ ದುರಸ್ತಿಗೆ ಅನುದಾನ ಒದಗಿಸಿಕೊಡುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸುಮಾಕೇಶವ್, ಮನೆ ದುರಸ್ತಿಗಾಗಿ ಒಟ್ಟು 58 ಅರ್ಜಿಗಳು ಸಲ್ಲಿಕೆಯಾಗಿದೆ. ಅವುಗಳಲ್ಲಿ ತೀರಾ ಶಿಥಿಲಗೊಂಡಿರುವ 16 ಮನೆಗಳನ್ನು ದುರಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದರು.
ಮಾರ್ಕೆಟ್ ವಾಣಿಜ್ಯ ಸಂಕೀರ್ಣದಲ್ಲಿ ಹಗಲಿರುಳು ವಿದ್ಯುತ್ ದೀಪ ಉರಿಯುತ್ತಿದೆ. ಮಾರ್ಕೆಟ್ ಬಂದ್ ಸಮಯದಲ್ಲೂ ದೀಪ ಉರಿಯುತ್ತಿರುವುದರಿಂದ ವಿದ್ಯುತ್ ಪೋಲಾಗುತ್ತಿರುವುದು ಮಾತ್ರವಲ್ಲದೇ ವಿನಾಃ ಕಾರಣ ಪುರಸಭೆ ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ ಎಂದು ಪ್ರತಿಮಾ ರಾಣೆ ಸಭೆಗೆ ತಿಳಿಸಿದರು.
ಅಪಘಾತ ವಲಯ
ತನ್ನ ವಾರ್ಡ್‌ನಲ್ಲಿ ಅಪಘಾತ ವಲಯವೊಂದಿದೆ. ಅಲ್ಲೊಂದು ಝೀಬ್ರಾ ಕ್ರಾಸ್ ಅಳವಡಿಸುವಂತೆ ಸಾಕಷ್ಟು ಬಾರಿ ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿದ್ದರೂ ಇಲ್ಲಿ ತನಕ ಯಾವೊಂದು ಪ್ರಯೋಜನವಾಗಿಲ್ಲ ಎಂದು ಪ್ರಭಾ ಅವರು ಹೇಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಇದೀಗ ಅಜೆಂಡಾದ ಮೇಲೆ ಚರ್ಚೆಯಾಗುತ್ತಿದೆ. ಅದು ಮುಗಿದ ಬಳಿಕ ಇತರೆ ವಿಚಾರಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಅಧ್ಯಕ್ಷರ ಮಾತಿನಿಂದ ಸಿಟ್ಟಾದ ಪ್ರತಿಮಾ ರಾಣೆ, ಸದಸ್ಯರಿಗೆ ತಮ್ಮ ವಾರ್ಡ್‌ನಲ್ಲಿನ ಸಮಸ್ಯೆ ಹೇಳಿಕೊಳ್ಳಲು ಸಾಮಾನ್ಯ ಸಭೆಯೊಂದು ವೇದಿಕೆಯಾಗಿದೆ. ಅವರ ಮಾತು ತಡೆಯುವುದು ಸರಿಯಲ್ಲ ಎಂದು ಏರುಧ್ವನಿಯಲ್ಲಿ ಹೇಳಿದರು. ಈ ವೇಳೆ ಮಾತನಾಡಲು ಮುಂದಾದ ಯೋಗೀಶ್ ಅವರನ್ನು ನೀವು ಸುಮ್ಮನಿರಿ ಎಂದು ಪ್ರತಿಮಾ ಅವರು ತಡೆದರು.
ಅನುಮತಿ ರಹಿತ ಹೊಟೇಲ್
ಅನುಮತಿ ಪಡೆಯದ ಹೊಟೇಲ್ ಒಂದು ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ ಹೊಟೇಲ್‌ನವರು ಕೂಡಲೇ ಸಂಬಂಧಪಟ್ಟ ದಾಖಲೆಯನ್ನು ಪುರಸಭೆಗೆ ನೀಡಬೇಕು. ತಪ್ಪಿದಲ್ಲಿ ಹೊಟೇಲ್ ಮಾಲಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶುಭದ ರಾವ್ ಆಗ್ರಹಿಸಿದರು.

ಕುಡಿಯುವ ನೀರಿನ ಬಗ್ಗೆ ಸಭೆಯಲ್ಲಿ ಚರ್ಚೆಯಾಗುತ್ತಿದ್ದಂತೆ ಮಾತನಾಡಿದ ಅಶ್ಪಕ್ ಅಹಮ್ಮದ್ ಸಚಿವ ಸುನೀಲ್ ಕುಮಾರ್ ಅವರು ವಾರಾಹಿ ಯೋಜನೆಯ ಮೂಲಕ ಕಾರ್ಕಳಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. ಹಾಗಾಗಿ ಕುಡಿಯುವ ನೀರಿನ ಚಿಂತೆ ಬೇಡವೆಂದರು.
ನಾಯಿಗಳ ಕಥೆ ಏನಾಯಿತು
ಬೀದಿನಾಯಿಗಳ ಹಾವಳಿ ನಗರದಲ್ಲಿ ವಿಪರೀತವಾಗಿದ್ದು, ಕಳೆದ ಹಲವಾರು ಸಭೆಯಲ್ಲಿ ಈ ಕುರಿತು ಮಾತನಾಡಿದ್ದೇನೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ. ನಾಯಿಗಳ ಕಥೆ ಏನಾಯಿತು ಎಂದು ಅಶ್ಪಕ್ ಕೇಳಿದರು.



























































