ಕಾರ್ಕಳ : ನಮ್ಮ ಮೂಲ ಸಂಸ್ಕೃತಿಯು ಜಾನಪದೀಯ ಕಲಾ ಪ್ರಕಾರಗಳಲ್ಲಿ ಬೆಸೆದುಕೊಂಡಿದ್ದು ಅದು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಇಂತಹ ಕಲೆಗಳು ನಶಿಸಿ ಹೋಗದೆ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಲಾಖೆ ವತಿಯಿಂದ ನಡೆಯುವ ತರಬೇತಿ ಶಿಬಿರಗಳು ಮಹತ್ವವಾದುದು. ಈ ಶಿಬಿರ ಮುಂದಿನ ವರ್ಷಗಳಲ್ಲೂ ಹೀಗೆ ಮುಂದುವರಿದಲ್ಲಿ ಮೂಲ ಸಂಸ್ಕೃತಿಯ ಉಳಿವಿಗೆ ಭದ್ರತೆ ದೊರತಂತಾಗುತ್ತದೆ ಎಂದು ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಾ. 4 ರಂದು ಕೋಟಿ ಚೆನ್ನಯ ಥೀಮ್ ಪಾರ್ಕ್‌ನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೋಟಿ ಚೆನ್ನಯ ಥೀಮ್ ಪಾರ್ಕ್ ಅಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ನಡೆದ ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ – ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳ ತರಬೇತಿ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ತಳ ಸಮುದಾಯದ ವಿಶಿಷ್ಟ ಕಲೆಗಳ ಉಳಿವಿಗಾಗಿ ತರಬೇತಿ ಶಿಬಿರಗಳು ನಡೆಯುತ್ತಿರುವುದು ಶ್ಲಾಘನೀಯ. ತನ್ನ ವಿನೂತನ ಕಾರ್ಯವೈಖರಿಯ ಮೂಲಕ ಇಲಾಖೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಸಚಿವ ಸುನೀಲ್ ಕುಮಾರ್ ಅವರ ಕಾರ್ಯಶೈಲಿ ಸಮಾಜಕ್ಕೆ ಮಾದರಿ. ಒಳ್ಳೆಯ ಕೆಲಸ ಮಾಡುವಾಗ ಟೀಕೆಗಳು ಕೇಳಿ ಬರುವುದು ಸಹಜ ಇವೆಲ್ಲವನ್ನೂ ಎದುರಿಸಿ ಮುನ್ನುಗ್ಗಬೇಕು, ಕೊನೆಗೆ ಟೀಕೆಗಳು ಸಾಯುತ್ತವೆ ನಾವು ಮಾಡಿದ ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅಭಿಪ್ರಾಯಪಟ್ಟರು.
ಕಲೆ ಪ್ರದರ್ಶನಕ್ಕೆ ಸೀಮಿತವಾಗದೆ ಅಂತರ್ಗತವಾಗಬೇಕು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಜಾನಪದ ಕಲೆಗಳು ನಮ್ಮ ಹಿರಿಯರ ಜೀವನ ಶೈಲಿಯ ಪ್ರತೀಕವಾಗಿದೆ. ನಮ್ಮ ಪೂರ್ವಜರ ಆಚಾರ ವಿಚಾರಗಳು, ಸಾಂಪ್ರಾದಾಯಿಕ ಪದ್ಧತಿಗಳು ಇನ್ನೂ ಜೀವಂತವಾಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಜನಪದ ಕಲಾ ಪ್ರಕಾರಗಳು. ಆದರೆ ಈ ವಿಶಿಷ್ಟ ಕಲೆಗಳು ಅಳಿವಿನಂಚಿನತ್ತ ಸಾಗುತ್ತಿರುವುದು ವಿಷಾದ. ಕಲೆ ಕೇವಲ ಮನೋರಂಜನೆ, ಪ್ರದರ್ಶನಕ್ಕೆ ಸೀಮಿತವಾಗದೆ ನಮ್ಮಲ್ಲಿ ಅಂತರ್ಗತವಾಗಬೇಕು. ಆಗ ಮಾತ್ರ ಕಲೆಯ ಉಳಿವಿಗಾಗಿ ಮಾಡುವಂತಹ ತರಬೇತಿ ಶಿಬಿರಗಳು, ಇನ್ನಿತರ ಕಾರ್ಯಕ್ರಮಗಳ ಹಿಂದಿನ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಗುರುವಂದನೆ – ಸನ್ಮಾನ
ಜಿಲ್ಲೆಯ ವಿವಿಧ ಭಾಗಗಳಲ್ಲಿ ತರಬೇತಿ ನೀಡಿದ ಡೋಲು ವಾದನದ ಗುರು ಗಣೇಶ್, ಕುಡುಬಿ ನೃತ್ಯ ತರಬೇತುದಾರ ಬಸವನಾಯ್ಕ, ಕಂಸಾಲೆ ತರಬೇತಿ ನೀಡಿದ ಸುಮಿತ್ ರಾಜ್, ಹಾಲಕ್ಕಿ ಸುಗ್ಗಿ ನೃತ್ಯ ಗುರು ಪ್ರಶಾಂತ ಬೀರ್ತಿ ಹಾಗೂ ಕಂಗೀಲು ನೃತ್ಯ ತರಬೇತುದಾರ ಪುನೀತ್ ರಾಜ್ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ಕಾರ್ಕಳ ಗೆಜೆಟೀಯರ್ ಪುಸ್ತಕದ ಮಾಹಿತಿ ಸಂಗ್ರಹಕಾರ ಆನಂದ ಮುದ್ರಾಡಿಯವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ
ಕಲರ್ಸ್ ಕನ್ನಡ ಖ್ಯಾತಿಯ ಕಲಾವತಿ ದಯಾನಂದ ಮತ್ತು ಬಳಗದವರಿಂದ ಗೀತಾಗಾಯನ ಮತ್ತು ಉಡುಪಿ ಜಿಲ್ಲೆಯಲ್ಲಿ ತರಬೇತಿ ಹೊಂದಿದ ಕಲಾವಿದರಿಂದ ತಳಸಮುದಾಯದ ಕಲಾ ಪ್ರಕಾರಗಳಾದ ಕಂಸಾಳೆ, ಕಂಗೀಲು, ಹಾಲಕ್ಕಿ ಸುಗ್ಗಿ, ಕುಡುಬಿ ನೃತ್ಯ ಹಾಗೂ ಡೋಲುವಾದನ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ, ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿಯ ಜಿಲ್ಲಾ ಸಂಚಾಲಕರಾದ ದಿನಕರ ಬಾಬು ಹಾಗೂ ಅನಿತಾ ಸಾಲ್ಯಾನ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ನಳಿನಿ ಎಸ್. ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಕೋಟಿ ಚೆನ್ನಯ ಥೀಮ್ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯ ಕರುಣಾಕರ್ ಕೋಟ್ಯಾನ್ ವಂದಿಸಿದರು.





