ಶರಾಬಿನ ಮತ್ತಿನಲ್ಲಿದ್ದ ವಿದ್ಯಾರ್ಥಿಯಿಂದ ವಿಮಾನದಲ್ಲಿ ಕೃತ್ಯ
ಹೊಸದಿಲ್ಲಿ : ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಇನ್ನೊಂದು ಪ್ರಕರಣ ಸಂಭವಿಸಿದೆ. ನ್ಯೂಯಾರ್ಕ್ನಿಂದ ಹೊಸದಿಲ್ಲಿಗೆ ಬರುತ್ತಿದ್ದ ಅಮೆರಿಕನ್ ಏರ್ಲೈನ್ಸ್ನಲ್ಲಿ ಶರಾಬಿನ ಮತ್ತಿನಲ್ಲಿದ್ದ ವಿದ್ಯಾರ್ಥಿಯೊಬ್ಬ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಅಮೆರಿಕನ್ ಏರ್‌ಲೈನ್ಸ್ ವಿಮಾನ ಸಂಖ್ಯೆ ಎಎ292ರಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ 9.16ಕ್ಕೆ ನ್ಯೂಯಾರ್ಕ್ನಿಂದ ಹೊರಟ ವಿಮಾನ 14 ಗಂಟೆ 26 ನಿಮಿಷಗಳ ಹಾರಾಟದ ನಂತರ ಶನಿವಾರ ರಾತ್ರಿ 10.12ಕ್ಕೆ ದಿಲ್ಲಿ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ಆರೋಪಿ ಅಮೇರಿಕನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎನ್ನಲಾಗಿದೆ. ಈ ಕೊಳಕು ಕೃತ್ಯಕ್ಕೆ ವಿದ್ಯಾರ್ಥಿ ಕ್ಷಮೆಯಾಚಿಸಿದ ನಂತರ ಸಂತ್ರಸ್ತ ಪ್ರಯಾಣಿಕ ದೂರು ದಾಖಲಿಸಿಲ್ಲ. ಎಟಿಸಿ ಸಿಐಎಸ್‌ಎಫ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದು, ಅವರು ಆರೋಪಿ ಪ್ರಯಾಣಿಕನನ್ನು ದಿಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ನ.26ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾರ್ಗಮಧ್ಯೆ ಕುಡಿದ ಮತ್ತಿನಲ್ಲಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ ಶಂಕರ್ ಮಿಶ್ರಾ ಎಂಬಾತ 70 ವರ್ಷದ ವೃದ್ಧ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.














































































