ಕಾರ್ಕಳ : ‘ಕಾರ್ಕಳದ ನಾಡದೇವತೆ’ ಎಂದೇ ಕರೆಯಲ್ಪಡುತ್ತಿರುವ ಕೋಟೆ ಮಾರಿಯಮ್ಮ ದೇವಸ್ಥಾನವು ಇಂದು ಸಮಗ್ರ ಜೀರ್ಣೋದ್ಧಾರದ ಹೊಸ್ತಿಲಲ್ಲಿ ಇದೆ. ಕಾರ್ಕಳದ ಎಂಟು ಮಾಗಣೆಯ ಭಕ್ತರಿಂದ ಆರಾಧಿಸುತ್ತಾ ಬಂದಿರುವ ಈ ಮಾರಿಯಮ್ಮ ದೇವಿಯ ಗುಡಿಯು ನಾಡಿನ ಪ್ರಮುಖ ಶಕ್ತಿಪೀಠವಾಗಿ ಪ್ರಸಿದ್ದಿ ಪಡೆದಿದೆ. ಜನವರಿ 19ರಿಂದ ಮೂರು ದಿನ ಮಾರಿಗುಡಿಯಲ್ಲಿ ಕೇರಳದ ಪ್ರಸಿದ್ಧ ಜ್ಯೋತಿಷ್ಯರ ಉಪಸ್ಥಿತಿಯಲ್ಲಿ ನಡೆದ ಅಷ್ಟ ಮಂಗಳ ಪ್ರಶ್ನಾ ಚಿಂತನೆಯಲ್ಲಿ ಸಮಗ್ರ ಜೀರ್ಣೋದ್ಧಾರಕ್ಕೆ ಅನುಮತಿ ದೊರೆತಿರುವುದು ವಿಶೇಷವಾಗಿದೆ. ಈ ದೇವಾಲಯವನ್ನು ಜಾಗೃತ ಶಕ್ತಿ ಪೀಠವಾಗಿ ಮುನ್ನಡೆಸುವ ಭರವಸೆಯೂ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ದೊರಕಿದೆ.
ಇದು ಇತಿಹಾಸ ಪ್ರಸಿದ್ಧ ಕ್ಷೇತ್ರ.
ಇದು ಕಾರ್ಣಿಕ ಕ್ಷೇತ್ರವಾಗಿ ಬೆಳಗುತ್ತಿರುವುದರ ಜೊತೆಗೆ ಐತಿಹಾಸಿಕ ಮಹತ್ವವನ್ನು ಹೊಂದಿರುವುದು ವಿಶೇಷ. ವಿಜಯ ನಗರ ಸಾಮ್ರಾಜ್ಯದ ಪೂರ್ವದಲ್ಲಿ ಕೂಡ ಈ ಮಾರಿಯಮ್ಮ ದೇವಸ್ಥಾನದ ಉಲ್ಲೇಖಗಳು ದೊರೆಯುತ್ತವೆ. ಮುಂದೆ ಹೊಯ್ಸಳ ಅರಸರ ಕಾಲದಲ್ಲಿ ಇಲ್ಲಿ ಮಾರೀ ಪೂಜೆಯು ಆರಂಭ ಆಗಿರುವ ಸಾಕ್ಷಿಗಳು ದೊರೆಯುತ್ತವೆ. ಅಂದರೆ ಸಾವಿರಾರು ವರ್ಷಗಳ ಇತಿಹಾಸವೂ ಈ ಮಾರಿಯಮ್ಮ ದೇವಳಕ್ಕೆ ಇದೆ ಎನ್ನುವುದು ಗೊತ್ತಾಗುತ್ತದೆ. ಅರಸರು ಯುದ್ಧಕ್ಕೆ ಹೊರಡುವಾಗ ಇಲ್ಲಿ ಪೂಜೆ ಸಲ್ಲಿಸಿ, ಅಭಿಷೇಕ ಮಾಡಿ ಮುಂದೆ ಹೋಗುತ್ತಿದ್ದ ಉಲ್ಲೇಖಗಳು ದೊರೆತಿವೆ. ಆಗೆಲ್ಲ ಮಾರಿಯಮ್ಮ ದೇವಿಯು ವಿಜಯಲಕ್ಷ್ಮೀಯಾಗಿ ನಿಂತು ಯುದ್ಧಗಳನ್ನು ಗೆಲ್ಲಿಸಿಕೊಡುತ್ತಿದ್ದರು ಎಂದು ಕೂಡ ನಿದರ್ಶನಗಳು ಇವೆ.
ಮಾರಿಯಮ್ಮ ದೇವಿಯ ಸಾನ್ನಿಧ್ಯ
ಕಾರ್ಕಳ ಬಸ್ ಸ್ಟಾಂಡ್ ಸಮೀಪ ಇರುವ ಈ ಕೋಟೆ ಮಾರಿಯಮ್ಮ ದೇವಸ್ಥಾನವು ಎಲ್ಲ ಜಾತಿ, ಮತ, ಧರ್ಮಗಳ ಭಕ್ತರಿಂದ ಆರಾಧನೆ ಪಡೆಯುತ್ತ ಬಂದಿದೆ. ಸಾನ್ನಿಧ್ಯದ ಶಕ್ತಿ ಹೆಚ್ಚಿಸಲು ನಾಗ ದೇವರ ಕಟ್ಟೆ ಇದೆ. ಮುಖ್ಯಪ್ರಾಣ ಮತ್ತು ಉಚ್ಚಂಗಿ ಇಲ್ಲಿ ಉಪದೇವರು. ಮುಖ್ಯಪ್ರಾಣ ದೇವರ ಶಕ್ತಿಯು ಕಲಿಯುಗದಲ್ಲಿ ಕೂಡ ಹಲವು ಬಾರಿ ಕಾರ್ಣಿಕ ಶಕ್ತಿಯನ್ನು ತೋರಿಸಿದೆ. ಜನ ಸಾಮಾನ್ಯರು ಈಗಲೂ ಈ ಕ್ಷೇತ್ರವನ್ನು ಮಾರಿಯಮ್ಮ ಮುಖ್ಯಪ್ರಾಣ ಸನ್ನಿಧಿ ಎಂದೇ ಕರೆಯುತ್ತಾರೆ. ಕಲ್ಕುಡ, ವರ್ತೆ ಮತ್ತು ತೂಕತೇರಿ ಇಲ್ಲಿ ಶಕ್ತಿಶಾಲಿ ದೈವಗಳು. ಪ್ರತೀ ಮಂಗಳವಾರ ಇಲ್ಲಿ ಜನಸಾಗರವೇ ಬಂದು ಸೇರುತ್ತದೆ. ನವರಾತ್ರಿಯ ಒಂಬತ್ತು ದಿನವೂ ವಿವಿಧ ಪೂಜೆಗಳು, ಹೂವಿನ ಪೂಜೆ, ಕುಂಕುಮಾರ್ಚನೆ ನಡೆಯುತ್ತವೆ. ಒಂದು ದಿನ ನಡೆಯುವ ಚಂಡಿಕಾ ಹೋಮವು ಜನಸಾಗರಕ್ಕೆ ಸಾಕ್ಷಿ ಆಗಿದೆ. ಸಾಂಸ್ಕೃತಿಕವಾಗಿ ಕೂಡ ಈ ದೇವಾಲಯವು ಯಕ್ಷಗಾನಕ್ಕೆ ಬಹು ದೊಡ್ಡ ಆಶ್ರಯವಾಗಿ ನಿಂತದ್ದು ಉಲ್ಲೇಖನೀಯ.
ವೈಭವದ ಮಾರಿಪೂಜೆ – ಜನ ಸಂದೋಹದ ಜಾತ್ರೆ.
ಪ್ರತೀವರ್ಷ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ನಡೆಯುವ ಮಾರಿಪೂಜೆಯು ಕಾರ್ಕಳ ಮತ್ತು ಪರ ಊರಿನ ಜನರಿಗೆ ಒಂದು ಅದ್ಭುತ ಮಹೋತ್ಸವ. ಕಾರ್ಕಳದ ಮೂರು ಮಾರ್ಗದ ಕೇಂದ್ರ ಸ್ಥಳದಲ್ಲಿ ಮಾರಿ ಅಮ್ಮನ ಪ್ರತಿಷ್ಠಾಪನೆಯಿಂದ ತೊಡಗಿ ಮತ್ತೆ ಮಾರಿಗುಡಿಗೆ ಹಿಂದಿರುಗಿ ಬರುವ ತನಕ ಇಡೀ ದಿನ ಸಾವಿರಾರು ಜನರು ದೇವಿಯ ದರ್ಶನ ಪಡೆಯುತ್ತಾರೆ. ಮಲ್ಲಿಗೆಯ ಹೂಗಳಿಂದ ಅಲಂಕಾರ ಆದ, ವಜ್ರಾಭರಣಗಳಿಂದ ಶೋಭಿಸುವ ದೇವಿಯ ಸೌಂದರ್ಯವೂ ವರ್ಣನಾತೀತ! ಹಿಂದಿನ ಕಾಲದಲ್ಲಿ ದೇವಿಗೆ ಜೀವಂತ ಕೋಣವನ್ನು ಬಲಿ ಕೊಡುವ ಸಂಪ್ರದಾಯ ಇತ್ತು. ಈಗ ಅದು ನಿಂತಿದೆ. ಆದರೆ ಆ ಕಾಲದಲ್ಲಿ ಬಳಕೆಯಾಗುತ್ತಿದ್ದ ಎಂಟು ಕತ್ತಿಗಳು ಈಗಲೂ ದೇವಿಯ ಗುಡಿಯಲ್ಲಿ ಇವೆ. ದೇವಿಯ ದರ್ಶನಕ್ಕೆ ದರ್ಶನ ಪಾತ್ರಿಗಳು ನಿಲ್ಲುತ್ತಿದ್ದ ಮೊಳೆ ಇರುವ ಪಾದುಕೆ ಇನ್ನೊಂದು ಕೌತುಕದ ನಿದರ್ಶನ. ಹೀಗೆ ಕಾರ್ಕಳದ ಮಾರಿಗುಡಿಯು ಹಲವು ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯನ್ನು ಒದಗಿಸುತ್ತದೆ. ಭಾವುಕ ಭಕ್ತ ಜನರ ಅಭೀಷ್ಟ ಸಿದ್ಧಿಗಾಗಿ ದೇವಿಯು ಇಂಬು ನೀಡಿದ ಸಾವಿರಾರು ನಿದರ್ಶನಗಳು, ಸಾಕ್ಷಿಗಳು, ಪುರಾವೆಗಳು ಇಲ್ಲಿ ದೊರೆಯುತ್ತವೆ.
ಇದೀಗ ಜೀರ್ಣೋದ್ಧಾರ ಪರ್ವ.
ಅಷ್ಟ ಮಂಗಳ ಪ್ರಶ್ನಾ ಚಿಂತನೆಯಲ್ಲಿ ಮೂಡಿಬಂದ ಎಲ್ಲ ನಿವೃತ್ತಿ ಕಾರ್ಯಗಳನ್ನು ಪೂರ್ತಿ ಮಾಡಿ ಇದೆ ಮೇ ತಿಂಗಳ 31ರಂದು ಕರ ಸೇವೆಯ ಮೂಲಕ ಹಳೆ ಗುಡಿಯನ್ನು ತೆರವು ಮಾಡಲಾಗಿದೆ. ಶ್ರೀ ಮಾರಿಯಮ್ಮ, ಮುಖ್ಯಪ್ರಾಣ ಮತ್ತು ಪರಿವಾರ ದೇವರನ್ನು ಬಾಲಾಲಯದಲ್ಲಿ ಸ್ಥಾಪನೆ ಮಾಡಲಾಗಿದೆ. ಕರ್ನಾಟಕ ಸರಕಾರದ ಸಚಿವರಾದ ವಿ. ಸುನೀಲಕುಮಾರ್ ಅವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಮಾರಿ ಗುಡಿಯ ಆಡಳಿತ
ಮೊಕ್ತೇಸರರಾದ ಕೆ. ಬಿ.ಗೋಪಾಲ ಕೃಷ್ಣ ರಾವ್ ಅವರು ಮತ್ತು ಇತರ ಪದಾಧಿಕಾರಿಗಳು ಜೀರ್ಣೋದ್ಧಾರದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದ ಅರ್ಚಕರು,ತಂತ್ರಿಗಳು ಮತ್ತು ಭಕ್ತರು ಸಂಕಲ್ಪ ಮಾಡಿ ಈ ಬಹುಕೋಟಿ ವೆಚ್ಚದ ಜೀರ್ಣೋದ್ಧಾರದ ಕೈಂಕರ್ಯದಲ್ಲಿ ಕೈ ಜೋಡಿಸಿದ್ದಾರೆ.
ಜೂನ್ 19- ಮುಷ್ಟಿ ಕಾಣಿಕೆ ಅರ್ಪಣೆ.
ಇಡೀ ನಾಡಿನ ಸಾವಿರಾರು ಭಕ್ತರು ಸೇರಿ ಮುಷ್ಟಿ ಕಾಣಿಕೆ ಸಮರ್ಪಣೆ ಮಾಡಿ ಜೀರ್ಣೋದ್ಧಾರದ ಮೂಲ ನಿಧಿಯನ್ನು ಸಂಗ್ರಹ ಮಾಡುವ ಕಾರ್ಯಕ್ರಮವು ನಿಗದಿ ಆಗಿದೆ. ಅಂದು ಪೂರ್ವಾಹ್ನ ಒಂಬತ್ತು ಗಂಟೆಗೆ ಸರಿಯಾಗಿ ಸಾವಿರಾರು ಭಕ್ತಾದಿಗಳು ಸೇರಿ ಮುಂದೆ ನಡೆಯುವ ಜೀರ್ಣೋದ್ಧಾರಕ್ಕೆ ಸಾಕ್ಷಿ ಆಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲ ಭಕ್ತಾದಿಗಳನ್ನು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಆಮಂತ್ರಣ ನೀಡಿದ್ದಾರೆ.