ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಸಂಚು ಮಾಡಿದ್ದ ಉಗ್ರರ ಹತ್ಯೆ

ಶ್ರೀನಗರ : ಈ ತಿಂಗಳ 30ನೇ ತಾರಿಕಿನಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯನ್ನು ಭಂಗಪಡಿಸುವ ಉದ್ದೇಶದಿಂದ ದಾಳಿಗೆ ಸ್ಕೆಚ್‌ ಹಾಕಿದ್ದ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರನ್ನು ನಿನ್ನೆ ತಡರಾತ್ರಿ ಸಾಯಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತಡರಾತ್ರಿ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಉಗ್ರ ಸಂಘಟನೆಯಾದ ಲಷ್ಕರ್ ಎ ತೊಯ್ಬಾದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಭದ್ರತಾ ಪಡೆಗೆ ಸುಳಿವು ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಉಗ್ರರ ಮೇಲೆ ದಾಳಿ ಮಾಡಿದ್ದು, ಪರಸ್ಪರ ಗುಂಡಿನ ದಾಳಿ ನಡೆದಿದೆ. ಈ ವೇಳೆ ಎನ್‌ಕೌಂಟರ್ ಮೂಲಕ ಉಗ್ರರನ್ನು ಮಟ್ಟ ಹಾಕಲಾಗಿದೆ. ಕಣಿವೆ ನಾಡಿನಲ್ಲಿ ಕೆಲ ದಿನಗಳಿಂದ ನಾಗರಿಕರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಈ ನಡುವೆ ಉಗ್ರರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಉಗ್ರರ ವಿರುದ್ಧದ ಭದ್ರತಾ ಕಾರ್ಯಾಚರಣೆ ವೇಳೆ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಉಗ್ರರು ಜೂ. 30ರಿಂದ ಆರಂಭವಾಗುವ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಳಿಯಲ್ಲಿ ಒಟ್ಟು ಮೂವರು ಉಗ್ರರು ಭಾಗಿಯಾಗಿದ್ದು, ಇದರಲ್ಲಿ ಇಬ್ಬರು ಪಾಕಿಸ್ಥಾನದವರು. ಇನ್ನೊಬ್ಬ ಸ್ಥಳೀಯನಾಗಿದ್ದು, ಈತ 2018ರಿಂದಲೂ ಪಾಕಿಸ್ತಾನದಲ್ಲೇ ವಾಸವಾಗಿದ್ದ. ಸದ್ಯ ಯಾತ್ರೆಯ ಮೇಲೆ ದಾಳಿಯ ಸಂಚು ರೂಪಿಸಿದ್ದ ಮೂವರನ್ನೂ ಸದೆಬಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಉಗ್ರ ಪಹಲ್ಗಾಮ್ ಅನಂತನಾಗ್‌ನವನಾಗಿದ್ದು, ಆತನ ಹೆಸರು ಆದಿಲ್ ಹುಸೇನ್ ಮೀರ್. ಈತ 2018ರಲ್ಲಿ ವಾಘಾ ಮೂಲಕ ಭಾರತದ ಗಡಿ ದಾಟಿ ಪಾಕಿಸ್ಥಾನಕ್ಕೆ ಹೋಗಿದ್ದ. ಈ ಮೂವರನ್ನೂ ಪಾಕಿಸ್ಥಾನದ ಎಲ್‌ಇಟಿ ಭಯೋತ್ಪಾದಕ ಸಂಘಟನೆ ದಾಳಿ ನಡೆಸಲು ಸಂಚು ರೂಪಿಸುವ ಉದ್ದೇಶದಿಂದ ಕಳುಹಿಸಿದೆ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ.
ಈ ಕಾರ್ಯಾಚರಣೆಯನ್ನು ದೊಡ್ಡ ಯಶಸ್ಸು ಎಂದು ಬಣ್ಣಿಸಿರುವ ಕಾಶ್ಮೀರ ಐಜಿಪಿ ವಿಜಯ್ ಕುಮಾರ್, ಮೂವರಲ್ಲಿ ಒಬ್ಬರು ಪಾಕಿಸ್ಥಾನದ ಫೈಸಲಾಬಾದ್‌ನವನು ಎಂದು ತಿಳಿಸಿದ್ದಾರೆ. ಉಗ್ರರ ಬಳಿಯಿದ್ದ ದಾಖಲೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡು AK-47 ರೈಫಲ್‌ಗಳು, 10 ಮ್ಯಾಗಜೀನ್‌ಗಳು, ಲೈವ್ ರೌಂಡ್‌ಗಳು, Y-SMS ಸಾಧನ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರವಷ್ಟೇ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಾಜಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ವಾರ್ಷಿಕ ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದರು. 43 ದಿನಗಳ ಅಮರನಾಥ ಯಾತ್ರಿಕರ ಮೇಲೆ ದಾಳಿ ಮಾಡಲು ಪಾಕ್‌ ಬೆಂಬಲಿತ ಉಗ್ರರು ಹಿಂದಿನಿಂದಲೂ ಪ್ರಯತ್ನಿಸುತ್ತಲೇ ಇದ್ದಾರೆ.



































































































error: Content is protected !!
Scroll to Top