ಅಪರಾಧ ತನಿಖೆಯಲ್ಲಿ ಪೊಲೀಸರ ಅಧಿಕಾರ ಮತ್ತು ಕರ್ತವ್ಯ

ನಾಗರಿಕರನ್ನು ರಕ್ಷಿಸುವ ಮತ್ತು ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನೊಳಗೆ ಬಂಧಿಸಿ ನ್ಯಾಯಾಲಯದ ಮುಖಾಂತರ ಶಿಕ್ಷೆಗೆ ಗುರಿಪಡಿಸುವ ಮಹತ್ತರ ಜವಾಬ್ದಾರಿ ಪೊಲೀಸರಿಗಿದೆ. ಅಪರಾಧಗಳನ್ನು ತಡೆಗಟ್ಟಲು ಮತ್ತು ಅಪರಾಧಗಳನ್ನು ಪತ್ತೆ ಹಚ್ಚಲು ಪೊಲೀಸ್‌ ಅಧಿನಿಯಮ ಹಾಗೂ ಅಪರಾಧಿತ ಪ್ರಕ್ರಿಯೆ ಸಂಹಿತೆ ಕಾನೂನಿಡಿಯಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ಕಾನೂನು ಬದ್ಧ ಅಧಿಕಾರವನ್ನು ಹೊಂದಿರುತ್ತಾರೆ. ತನಿಖಾಧಿಕಾರವು ಪೊಲೀಸರ ಪ್ರಮುಖ ವಿಶೇಷ ಅಧಿಕಾರವಾಗಿದೆ. ಅಪರಾಧಕ್ಕೆ ಸಂಬಂಧಪಟ್ಟ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯುವುದರಿಂದ ಅಪರಾಧ ತನಿಖೆ (Investigation)ಯನ್ನು ಸಮರ್ಪಕವಾಗಿ ಮತ್ತು ಲೋಪದೋಷ ರಹಿತವಾಗಿ ನಡೆಸಿ ಅಪರಾಧ ಕೃತ್ಯದ ಕುರಿತು ಸೂಕ್ತ ಸಾಕ್ಷ್ಯಾಧಾರವನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಜವಾಬ್ದಾರಿಯನ್ನು ಪೊಲೀಸ್ ಅಧಿಕಾರಿ (‌Investigation officer)ಹೊಂದಿರುತ್ತಾರೆ. ಸಾಮಾನ್ಯವಾಗಿ ಅಪರಾಧ ತನಿಖೆಯು ಎರಡು ಪ್ರಮುಖ ಅಂಶಗಳನ್ನು ಹೊಂದಿರುವುದು. ಅಪರಾಧ ಕೃತ್ಯದ ಶೋಧನೆ ನಡೆಸಿ ಆರೋಪಿಯನ್ನು ಬಂಧಿಸುವುದು ಮತ್ತು ಆರೋಪಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದ ತನಿಖೆಗಾಗಿ ಸೂಕ್ತ ಸಾಕ್ಷಿ ಪುರಾವೆಗಳನ್ನು ನ್ಯಾಯಾಲಯಕ್ಕೆ ಒದಗಿಸುವುದು.

ಅಪರಾಧ ತನಿಖೆಯಲ್ಲಿ ಮೂರು ವಿಧಾನಗಳಿವೆ. ಇವು ಯಾವುದೆಂದರೆ ಪ್ರಶ್ನಿಸುವಿಕೆ (Interrogation) ಸಂದರ್ಶನ (intevriew) ಮತ್ತು ಉಪಕರಣ ಪ್ರಯೋಗ (Instrumentation). ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಸಂಶಯಾಸ್ಪದ ವ್ಯಕ್ತಿಗಳನ್ನು ಪ್ರಶ್ನಿಸುವುದರಿಂದ ತನಿಖಾಧಿಕಾರಿಯು ವಿವರಗಳನ್ನು ಪಡೆಯುತ್ತಾರೆ. ಅಪರಾಧಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಸಂಬಂಧಪಟ್ಟ ವ್ಯಕ್ತಿಯನ್ನು ಸಂದರ್ಶಿಸುತ್ತಾರೆ ಮತ್ತು ಅಪರಾಧ ತನಿಖೆಯಲ್ಲಿ ಹಲವಾರು ಬಗೆಯ ಉಪಕರಣಗಳನ್ನು ಅಳವಡಿಸಿಕೊಂಡು ಬೌತಿಕ ಪುರಾವೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಶಿಸಿ ಅಗತ್ಯವಿದ್ದಲ್ಲಿ ವಿಧಿ ವಿಜ್ಞಾನದ ತಜ್ಞರ ಅಭಿಪ್ರಾಯ ಪಡೆದು ಅಪರಾಧಿಗಳನ್ನು ಪತ್ತೆ ಹಚ್ಚುತ್ತಾರೆ.
ಅಪರಾಧಕ್ಕೆ ಸಂಬಂಧಪಟ್ಟಂತೆ ಯಾವುದೇ ವ್ಯಕ್ತಿ ಪೊಲೀಸರಿಗೆ ಮಾಹಿತಿಯನ್ನು ಲಿಖಿತ ರೂಪದಲ್ಲಿ ಅಥವಾ ಮೌಖಿಕವಾಗಿ ತಿಳಿಸಬಹುದು. ಮೌಖಿಕ ಮಾಹಿತಿಯನ್ನು ಸ್ವೀಕರಿಸುವ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿಯನ್ನು ಲಿಖಿತವಾಗಿ ರೂಪಾಂತರಿಸಿಕೊಂಡು ಮಾಹಿತಿ ಕೊಟ್ಟ ವ್ಯಕ್ತಿಗೆ ಓದಿ ಹೇಳಿ ಅವರ ಸಹಿ ಪಡೆದುಕೊಂಡು ಅದರ ಒಂದು ಪ್ರತಿಯನ್ನು ದೂರು ನೀಡಿದ ವ್ಯಕ್ತಿಗೆ ನೀಡಬೇಕಾಗಿರುತ್ತದೆ. ಈ ರೀತಿಯಾಗಿ ಮಾಹಿತಿ ಕೊಡುವುದಕ್ಕೆ ಪ್ರಥಮ ವರ್ತಮಾನ ವರದಿ (fir) ಎನ್ನುತ್ತಾರೆ. ಒಂದು ವೇಳೆ ದೂರುದಾರರು ಪೊಲೀಸರಿಗೆ ನೀಡುವ ದೂರು ಅಥವಾ ಮಾಹಿತಿಯನ್ನು ಸ್ವೀಕರಿಸಲು ಪೊಲೀಸ್ ಅಧಿಕಾರಿ ನಿರಾಕರಿಸಿದಲ್ಲಿ ಅದನ್ನು ದೂರು ನೀಡುವ ವ್ಯಕ್ತಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಕಳುಹಿಸಿಕೊಡಬಹುದಾಗಿದೆ.
ದೂರವಾಣಿ ಮೂಲಕ ಪ್ರಥಮ ವರ್ತಮಾನ ವರದಿ ಮಾಡಲು ಸಾಧ್ಯವಿಲ್ಲ. ಆದರೆ, ಪೊಲೀಸರು ಇಂತಹ ಮಾಹಿತಿಯನ್ನು ನಮೂದಿಸಿಕೊಂಡು ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ಯಾವುದೇ ಅಪರಾಧವನ್ನು ಪತ್ತೆ ಮಾಡುವಲ್ಲಿ ಪೊಲೀಸ್‌ ಅಧಿಕಾರಿ ಯಶಸ್ವಿಯಾಗಬೇಕಾದರೆ ಅವರು ಚಾಣಾಕ್ಷ್ಯತನದಿಂದ ಮತ್ತು ಜಾಗರೂಕತೆಯಿಂದ ವರ್ತಿಸಬೇಕಾಗುತ್ತದೆ. ತಕ್ಷೀರು ಅಥವಾ ಅಪರಾಧ ಕೃತ್ಯ ನಡೆದ ಸ್ಥಳವನ್ನು ರಕ್ಷಿಸುವುದು ಪೊಲೀಸರ ಆದ್ಯ ಕರ್ತವ್ಯ. ಅಲ್ಲಿಯ ಬೌತಿಕ ಪುರಾವೆಗಳನ್ನು ನಾಶಪಡಿಸದಂತೆ ನೋಡಿಕೊಂಡು ದೃಶ್ಯದ ಛಾಯಾಚಿತ್ರವನ್ನು ತೆಗೆಸಿ, ಸ್ಥಳದ ಕಚ್ಛಾ ನಕ್ಷೆಯನ್ನು ತಯಾರಿಸಿ ಗಾಯಗೊಂಡ ಅಥವಾ ಮರಣ ಹೊಂದಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕಳಿಸಿ ಕೃತ್ಯವನ್ನು ನೋಡಿದ ಸಾಕ್ಷಿದಾರರಿಗೆ ಸೂಕ್ತ ರಕ್ಷಣೆ ನೀಡುವ ಜವಾಬ್ದಾರಿಯು ತನಿಖಾಧಿಕಾರಿಯ ಮೇಲಿರುತ್ತದೆ. ಸ್ಥಳದಲ್ಲಿ ಕೃತ್ಯಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸಿ ಅವುಗಳ ವಸ್ತುಸ್ಥಿತಿ ಕೆಡದಂತೆ ಜಾಗ್ರತೆ ವಹಿಸಿ ಈ ರೀತಿ ಸಂಗ್ರಹಿಸಿದ ಪುರಾವೆಗಳನ್ನು ದಾಖಲೆ ಮಾಡಿಕೊಳ್ಳುವುದು ಮತ್ತು ತಾನು ವೀಕ್ಷಿಸಿದ ದೃಶ್ಯವನ್ನು ತನ್ನ ಅನುಭವದಂತೆ ವಿಶ್ಲೇಷಣೆ ಮಾಡಿ ಈ ಕುರಿತು ಸ್ಥಳೀಯ ಸಾಕ್ಷಿದಾರರ ಸಮಕ್ಷಮ ಪಂಚನಾಮೆಯನ್ನು ತನಿಖಾಧಿಕಾರಿ ತಯಾರಿಸಬೇಕಾಗುತ್ತದೆ. ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಹೊಂದಿರುವ ಯಾವುದೇ ವ್ಯಕ್ತಿಯನ್ನು ವಿಚಾರಿಸುವ ಅಧಿಕಾರವನ್ನು ಪೊಲೀಸ್‌ ತನಿಖಾಧಿಕಾರಿ ಹೊಂದಿರುತ್ತಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಮತ್ತು ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ಸಲುವಾಗಿ ಸೇವೆಯನ್ನು ಸಲ್ಲಿಸುವ ಪೊಲೀಸರಿಗೆ ಸರ್ವ ವಿಧದ ಸಹಕಾರವನ್ನು ನೀಡುವ ಜವಾಬ್ದಾರಿಯನ್ನು ಪ್ರತಿಯೊಬ್ಬ ನಾಗರಿಕನು ಹೊಂದಿರುತ್ತಾನೆ.

ಕೆ. ವಿಜೇಂದ್ರ ಕುಮಾರ್, ಹಿರಿಯ ನ್ಯಾಯವಾದಿ, ಕಾರ್ಕಳ.
ಮೊ: 9845232490















































































error: Content is protected !!
Scroll to Top