ಯಕ್ಷಾಂಕಣ- ಕಣ್ಣ ರೆಪ್ಪೆ ಮುಚ್ಚಿ ಯಾರಲ್ಲಾದರೂ ಮಾತಾಡಿ. ನಿಮಗೆ ಎಷ್ಟು ಮಾತಾಡಲಿಕ್ಕಾದೀತು ?

  

ಈ ಮಾತನ್ನು ನನ್ನಲ್ಲಿ ಹೇಳಿದವರು ” ಯಕ್ಷರಂಗದ ಭೀಷ್ಮ ” ಎನಿಸಿದ ದಿ‌. ಡಾಕ್ಟರ್ ಶೇಣಿ ಗೋಪಾಲಕೃಷ್ಣ ಭಟ್ಟರು.
ನನ್ನಲ್ಲಿ ಈ ಮಾತನ್ನು ಹೇಳಲು ಕಾರಣವಾದ ಘಟನೆ ಗೊತ್ತಾಗಬೇಕಾದರೆ, 15 ವರ್ಷ ಹಿಂದೆ ಹೋಗಬೇಕು. ಅದನ್ನೀಗ ಓದಿ.
ನಾನು ತಾಳಮದ್ದಳೆಯ ಪ್ರೇಕ್ಷಕನಾಗಿ ಪ್ರವೇಶಿಸಿದ ಕಾಲ ” ಶೇಣಿಯುಗ ” ಆಗಿತ್ತು. ( ಇದು ಸವರ್ಣಯುಗವೂ ಆಗಿತ್ತ ) ಆ ಕಾಲದಲ್ಲಿ ಪೆರ್ಲ, ಶೇಣಿ, ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್, ರಾಮದಾಸ ಸಾಮಗ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಕುಂಬ್ಳೆ ಸುಂದರ ರಾವ್, ಡಾ. ಪ್ರಭಾಕರ ಜೋಷಿ, ಮಾರೂರು ಮಂಜುನಾಥ ಭಂಡಾರಿ, ಕಾಂತರೈ ಮೂಡಬಿದಿರೆ, ಮುಂತಾದ ಅರ್ಥಧಾರಿಗಳು ಪ್ರಸಿಧ್ಧರಾಗಿದ್ದರು.
ಡಾ. ಶೇಣಿಯವರು ತಮ್ಮ ಪ್ರಖರ ಮಾತುಗಾರಿಕೆ, ಆಕರ್ಷಕ ಕಂಠ, ವೈಚಾರಿಕತೆ‌, ಯಥೋಚಿತ ಪೀಠಿಕೆ, ವಾದಸಂವಾದಗಳ ಮಂಡನೆ, ಖಂಡನೆಗಳಿಂದ ಅಗ್ರಸ್ಥಾನದಲ್ಲಿದ್ದರು. ಸಾಹಿತ್ಯ ಪ್ರಿಯನಾದ ನಾನು ಸಹಜವಾಗಿಯೇ ಡಾ. ಶೇಣಿಯವರ ಅರ್ಥಗಾರಿಕೆಗೆ ಸಮ್ಮೋಹನಕ್ಕೊಳಗಾದೆ. ಶೇಣಿಯವರು ನನ್ನ ತಂದೆಯವರಾದ ದಿ.ಎಂ.ಸುಂದರ ಕುಡ್ವರ ಮಿತ್ರರಲ್ಲದೇ, ಅವರಿದ್ದ ಸುರತ್ಕಲ್ ಮೇಳದ ಯಜಮಾನರಾದ ಕಸ್ತೂರಿ ಪೈ ಸಹೋದರರು ನನಗೆ ಸಂಬಂಧಿಗಳೂ ಆದ ಕಾರಣ, ಶೇಣಿಯವರು ನನ್ನ ತಂದೆಯವರನ್ನು ಭೇಟಿಯಾಗಲು ನಮ್ಮ ಬಜ್ಪೆಯ ಮನೆಗೆ ಆಗಾಗ ಬರುತ್ತಿದ್ದರು. ಹೀಗೆ ಶೇಣಿಯವರೆಂದರೆ ನನಗೆ ಗುರುಭಾವನೆ ತನ್ನಷ್ಟಕ್ಕೇ ಮೂಡಿತ್ತು. ನಾನು ಶೇಣಿಯವರಲ್ಲಿ ಮಾತಾಡುವಾಗ ” ಗುರುಗಳೇ ” ಎಂದೇ ಸಂಬೋಧಿಸುತ್ತಿದ್ದೆ.


ಶೇಣಿಯವರ ಅರ್ಥ ಕೇಳಲು ನಾನು ಶಿವಮೊಗ್ಗ, ಕುಂದಾಪುರ, ಪುತ್ತೂರು – ಹೀಗೆ ಎಷ್ಟೋ ದೂರದ ಊರುಗಳಿಗೂ ಹೋದವನಲ್ಲದೇ, ಶೇಣಿಯವರ ಮುನ್ನೂರಕ್ಕೂ ಅಧಿಕ ಅರ್ಥ ಕೇಳಿದವನು, ವೇಷ ನೋಡಿದವನು. ಶೇಣಿಯವರನ್ನು ಹಲವಾರು ಭಾರಿ ಸಂಮಾನಿಸಿದ್ದೆ. ‌ಇದೆಲ್ಲಾ ಈಗ ಗತ ಇತಿಹಾಸ. ಈ ಘಟನೆ ನಡೆದದ್ದು 2006 ರಲ್ಲಿ . ಶೇಣಿಯವರು ಅರ್ಥಗಾರಿಕೆಯಿಂದ ನೇಪಥ್ಯಕ್ಕೆ ಸರಿದ ಕಾಲವದು. ಆದರೂ, ನಾನು ಯಾವಾಗಲೊಮ್ಮೆ ಶೇಣಿಯವರಿಗೆ ಫೋನ್ ಮಾಡಿ, ಅವರ ಯೋಗಕ್ಷೇಮ ವಿಚಾರಿಸುತ್ತಿದ್ದೆ. ಒಂದು ದಿನ ಯಕ್ಷಪ್ರಭ ಪತ್ರಿಕೆ ಓದುತ್ತಿದ್ದಾಗ ಒಂದು ಸುದ್ದಿ ಓದಿದೆ. ” ಯಕ್ಷರಂಗದ ಭೀಷ್ಮ ಶೇಣಿಯವರಿಗೆ ಸ್ವಗೃಹದಲ್ಲಿ ಸಂಮಾನ ” ಎಂಬ ವರದಿ ಓದಿದೆ. ಸಂಮಾನದ ಫೋಟೋವನ್ನೂ ಹಾಕಿದ್ದರು. ಆ ಫೋಟೋ ನೋಡಿ ದಿಗ್ಭ್ರಮೆಗೊಂಡೆ. ಯಾವಾಗಲೂ ಬಂಗಾರದ ಗುಂಡಿಯ ಶುಭ್ರವಾದ ಫೈರನ್ ಧರಿಸಿ, ಬಂಗಾರದ ಕಟ್ಟಿನ ಕನ್ನಡಕ ಧರಿಸಿ‌ ರಾಜಗಾಂಭೀರ್ಯದ ಪೋಷಾಕಿನಿಂದ ಮೆರೆಯುತ್ತಿದ್ದ ಶೇಣಿಯವರು, ಆ ಫೋಟೋದಲ್ಲಿ, ಅತ್ಯಂತ ಕೃಶಕಾಯರಾಗಿ ಗುರುತು ಹಿಡಿಯಲಾರದಷ್ಟು ಬದಲಾವಣೆಗೊಂಡಿದ್ದರು. ನನಗೆ ” ಇವರು ಶೇಣಿಯವರಾ ? ” ಎನ್ನುವಷ್ಟು ಆ ಫೋಟೋ ಶಾಕ್ ಕೊಟ್ಟಿತ್ತು. ಕೂಡಲೇ ಯಕ್ಷಪ್ರಭದ ಸಂಪಾದಕ ಕುಬಣೂರು ಶ್ರೀಧರ್ ರಾವ್ ರವರಿಗೆ ಫೋನ್ ಮಾಡಿ ವಿಚಾರಿಸಿದಾಗ ಅದು ಶೇಣಿಯವರಿಗೆ ಇತ್ತೀಚೆಗೆ ಅವರ ಮನೆಯಲ್ಲೇ ಆದ ಸಂಮಾನದ ಫೋಟೋ, ಅವರು, ಅಷ್ಟು ಕೃಶರಾಗಿದ್ದಾರೆ ಎಂದು ತಿಳಿಸಿದರು. ನನಗೆ ಅತ್ಯಂತ ವೇದನೆಯಾಯಿತು. ನನಗೆ ಶೇಣಿಯವರನ್ನು ಭೇಟಿ ಮಾಡಲೇಬೇಕೆನಿಸಿತು. ಮರುದಿನವೇ ಭಾನುವಾರವಾದ ಕಾರಣ, ಅಂದೇ ಶೇಣಿಯವರ ಮನೆಗೆ ಹೋಗುವ ಯೋಜನೆ ಹಾಕಿದೆ. ನನ್ನ ಮಿತ್ರರು ಅನೇಕರು ಜತೆಗೂಡಿದರು. ಕೂಡಲೇ ನಾನು ಶೇಣಿಯವರಿಗೆ ಕರೆಮಾಡಿ , ನಾವು ಬರುವ ವಿಚಾರ ತಿಳಿಸಿದೆ. ನಾನು ಶೇಣಿಯವರಲ್ಲಿ ಸಂಜೆ 4.00 ಘಂಟೆಗೆ ಬರುವುದಾಗಿ ಫೋನ್ ಮೂಲಕ ತಿಳಿಸಿದ್ದೆ. ಆದರೂ ನಾವು ಕಾಸರಗೋಡು ತಲಪುವಾಗಲೇ 4.45 ಘಂಟೆ ಆಗಿತ್ತು.


ಕಾಸರಗೋಡಿನಲ್ಲಿ ಛಾಯಾಗ್ರಾಹಕರನ್ನು ಭೇಟಿಯಾಗಿ, ಅವರನ್ನೂ ಸೇರಿಸಿ, ಶೇಣಿಯವರ ಮನೆಗೆ ಬಂದಾಗ 5.00 ಘಂಟೆಯಾಗಿತ್ತು. ಆಗ ಮೊಬೈಲ್ ಇಲ್ಲದ ಕಾಲ. ಶೇಣಿಯವರು ಮಲಗಿದವರು, ನಾಲ್ಕು ಘಂಟೆಗೇ ಎದ್ದು ನಮಗಾಗಿ ಕಾಯುತ್ತಿದ್ದರು. ಸಮಯ ಮೀರಿದಂತೆ ” ಕುಡ್ವರು ಇನ್ನೂ ಏಕೆ ಬರಲಿಲ್ಲ ” ಎಂದು ತಮ್ಮ ಮಗನಲ್ಲಿ ಹಲವಾರು ಭಾರಿ ಕೇಳಿದ್ದರಂತೆ. ನಾವು ಶೇಣಿಯವರ ಮನೆಗೆ ಬಂದಾಗ ಸಂತೋಷಗೊಂಡರು. ನಾವು ಶೇಣಿಯವರ ಪಾದಕ್ಕೆರಗಿ ಆಶೀರ್ವಾದ ಪಡೆದು, ಅವರ ಅರೋಗ್ಯದ ಬಗ್ಗೆ ಮಾಹಿತಿ ಪಡೆದು, ಶೇಣಿಯವರನ್ನು ಸಂಮಾನಿಸಿದೆವು. ಆ ಸಮಯ ಶೇಣಿಯವರು ಕೃಶರಾಗಿದ್ದರೂ, ಮಾನಸಿಕವಾಗಿ ಉಲ್ಲಸಿತರಾಗಿದ್ದರು. ಅವರ ಕಂಠವೂ ಮೊದಲಿನಂತೆಯೇ ಇತ್ತು. ಆದರೂ ದುರಂತವೆಂದರೆ ಧೃಷ್ಟಿಯನ್ನು ಕಳೆದುಕೊಂಡಿದ್ದರು. ಕೇವಲ ನನ್ನ ಸ್ವರದಿಂದಲೇ ನಾನು ಯಾರೆಂದು ತಿಳಿದುಕೊಂಡರು. ಅಂದು ಯಕ್ಷಗಾನ, ತಾಳಮದ್ದಳೆ, ಹಿಂದಿನ ಕೆಲವು ಫಟನೆಗಳು, ಪ್ರಸಂಗಗಳ ಕುರಿತು ಎರಡು ಘಂಟೆಗಳಷ್ಟು ಹೊತ್ತು ಮಾತಾಡಿದರು. ತಾನು ಧೃಷ್ಟಿದೋಷದ ಕೊರತೆ ಹಾಗೂ ನಿಶ್ಯಕ್ತಿ ಬಿಟ್ಟರೆ, ಆರೋಗ್ಯವಾಗಿದ್ದೇನೆ ಎಂದರು.
ಆಗ ನನಗೊಂದು ಯೋಚನೆ ಹೊಳೆಯಿತು. ನಾನು ಶೇಣಿಯವರಲ್ಲಿ ” ಗುರುಗಳೇ, ನಿಮ್ಮ ಕಂಠ, ಜ್ಞಾಪಕ ಶಕ್ತಿ ಉತ್ತಮವಾಗಿದೆ. ನನಗೆ ನಿಮ್ಮ ಅರ್ಥ ಕೇಳಬೇಕೆಂದು ಆಶೆಯಾಗಿದೆ. ನೀವು ಬರಬೇಕಾಗಿಲ್ಲ. ನಾನೇ ಕೆಲವು ಕಲಾವಿದರನ್ನು, ಹಿಮ್ಮೇಳದವರನ್ನೂ ಕರಕೊಂಡು ಬರುತ್ತೇನೆ. ನಿಮ್ಮ ಮನೆಯಲ್ಲೇ, ನಿಮ್ಮ ಅರ್ಥಗಾರಿಕೆಯ ಒಂದು ಕೂಟ ಮಾಡಿದರೆ ಹೇಗೆ ” ಎಂದೆ.

ಆಗ ಶೇಣಿಯವರು ನಿರಾಕರಿಸಿ, " ಕುಡ್ವರೇ, ನಾನು ಈಗಲೂ ಅರ್ಥ ಹೇಳಲು ಸಮರ್ಥ. ಆದರೂ ಧೃಷ್ಟಿ ಸರಿಯಾಗಿಲ್ಲದ ಕಾರಣ, ಅರ್ಥ ಹೇಳುವುದು ಸರಿಯಲ್ಲ. ಏಕೆಂದರೆ, ನಾನು ಅರ್ಥ ಹೇಳುವಾಗ ಪ್ರೇಕ್ಷಕರು ನನಗೆ ಕಾಣಬೇಕು. ಪ್ರೇಕ್ಷಕರಿಗೆ ನನ್ನ ಅರ್ಥ ಇಷ್ಟವಾಗಿದೆಯೋ, ಇಲ್ಲವೋ  ಎಂಬುದನ್ನು ಪ್ರೇಕ್ಷಕರನ್ನು ನೋಡಿದಾಗ ಮಾತ್ರ ಗೊತ್ತಾಗುವುದಲ್ಲವೇ? ಪ್ರೇಕ್ಷಕರ ಸ್ಪಂದನೆ ಯಾವತ್ತೂ ಅರ್ಥಧಾರಿಗಳ ಅರ್ಥಗಾರಿಕೆಯ ಮೆರುಗು ಹೆಚ್ಚಿಸುವುದು. ನನ್ನ ಅರ್ಥ ಪ್ರೇಕ್ಷಕರಿಗೆ ನೀರಸವಾಗಿ ಕಂಡರೆ ನನಗೆ ತಿಳಿಯುವುದಾದರೂ ಹೇಗೆ? ಈ ಕಾರಣಕ್ಕಾಗಿಯೇ ನನಗೆ ವಿಶ್ವ ವಿದ್ಯಾಲಯದಿಂದ  ಗೌರವ ಡಾಕ್ಟರೇಟ್ ಕೊಡುವಾಗ, ಅದಕ್ಕೆ ಉತ್ತರವಾಗಿ  ನನಗೆ ಮಾತಾಡಲು ಸೂಚಿಸಿದಾಗ ನಾನು ಮಾತಾಡಲು ನಿರಾಕರಿಸಿದ್ದೆ. ಪ್ರೇಕ್ಷಕರ ಮನಸ್ತಿತಿ ಅರಿತು ಮಾತಾಡಿದರೆ ಮಾತ್ರ ಉತ್ತಮವಲ್ಲವೇ? ಪ್ರೇಕ್ಷಕರ ಮುಖ ಭಾವನೆ ಕಾಣದೇ ಏನನ್ನಾದರೂ ಮಾತಾಡಲು ಸಾಧ್ಯವೇ?

” ಕುಡ್ವರೇ, ನೀವು ಬೇಕಾದರೆ ಪ್ರಯತ್ನಿಸಿ ನೋಡಿ. ಕಣ್ಣ ರೆಪ್ಪೆ ಮುಚ್ಚಿ ಯಾರಲ್ಲಾದರೂ ಮಾತಾಡಿ. ನಿಮಗೆ ಎಷ್ಟು ಸಮಯ ಮಾತಾಡಲಿಕ್ಕಾದೀತು? ” ಎಂದರು. ಕೊನೆಗೆ ನನ್ನ ಒತ್ತಾಯಕ್ಕೆ ಕಟ್ಟುಬಿದ್ದು ” ಆಯಿತು ಕುಡ್ವರೇ, ಒಂದು ಸಣ್ಣ ಕೂಟ ನಮ್ಮ ಮನೆಯಲ್ಲೇ ಇಡುವಾ. ಸಣ್ಣ ಪ್ರಸಂಗ ಸಾಕು. ಹೆಚ್ಚು ಕಲಾವಿದರು ಬೇಡ. ಯಾವಾಗ ಎಂದು ತಿಳಿಸಿ ” ಎಂದರು.

ನನಗಂತೂ ಶೇಣಿಯವರ ಅರ್ಥ ಕೇಳಬಹುದಲ್ಲಾ ಎಂದು ಅತ್ಯಂತ ಸಂತೋಷ ವಾಯಿತು. ನಾವು ಶೇಣಿಯವರಲ್ಲಿ ಮೂಡಬಿದಿರೆಗೆ ಹಿಂದಿರುಗಿದೆವು. ನಾನು ಮೂಡಬಿದಿರೆಗೆ ಬಂದು ಈ ನನ್ನ ಯೋಜನೆ ತಿಳಿಸಿದಾಗ, ಶೇಣಿಯವರ ಅಭಿಮಾನಿ ಅನೇಕರು ನಾವೂ ಬರುತ್ತೇವೆ ಎಂದಾಗ, ಎರಡು ಟೆಂಪೋ ಮಾಡಿ ಹೋಗುವುದಾಗಿ ಯೋಚಿಸಿದೆವು. ” ಪಟ್ಟಾಭಿಷೇಕ ” ಪ್ರಸಂಗವೆಂದೂ, ಶೇಣಿಯವರ ದಶರಥ, ಮೂಡಂಬೈಲು ಶಾಸ್ತ್ರಿಗಳ ಕೈಕೇಯಿ, ಶಂಭುಶರ್ಮರ ಮಂಥರೆ, ಡಾ.ಜೋಷಿಯವರ ಶ್ರೀರಾಮ, ಕುಂಬ್ಳೆ ಸುಂದರರಾಯ ಭರತ ಎಂದೂ ನಾವು ನಿರ್ಧರಿಸಿದೆವು. ಆದರೂ ನಮ್ಮ ಯೋಜನೆ ಕಾರ್ಯಗತವಾಗಲಿಲ್ಲ. ಅದರ ಮೊದಲೇ, ಶೇಣಿಯವರು ನಿಧನರಾದ ಸುದ್ದಿ ಬರಸಿಡಿಲಿನಂತೆ ಬಂತು. ನಮ್ಮ ಯೋಜನೆ ವಿಫಲವಾದುದರ ಕುರಿತು ನನಗೆ ಈಗಲೂ ವೇದನೆಯಿದೆ.

ಅದರ ನಂತರ ನಾನು ಎಷ್ಟೋಸಲ, ಶೇಣಿಯವರು ಹೇಳಿದ ಮಾತನ್ನು ನೆನಪಿಸುತ್ತಿದ್ದೇನೆ. ಅದರ ಪ್ರಯೋಗ ಮಾಡಲು ಹೋಗಿ ವಿಫಲನಾಗಿದ್ದೇನೆ. ಅದೇ ಶೇಣಿಯವರು ಹೇಳಿದ್ದ ” ನೀವು ಕಣ್ಣ ರೆಪ್ಪೆ ಮುಚ್ಚಿ ಯಾರಲ್ಲಾದರೂ ಮಾತಾಡಿ. ನಿಮಗೆ ಎಷ್ಟು ಸಮಯ ಮಾತಾಡಲಿಕ್ಕಾದೀತು? ಇದನ್ನು ನೀವೂ ಪ್ರಯತ್ನಿಸಿ, ಸಾಧ್ಯವಾಗುತ್ತದಾ ಎಂದು ನೋಡಿ.

ಎಂ.ಶಾಂತರಾಮ ಕುಡ್ವ, ಮೂಡಬಿದಿರೆ


































































































error: Content is protected !!
Scroll to Top