ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ-ಸಾಧಕರಿಗೆ ಸನ್ಮಾನ

ಕಾರ್ಕಳ : ಶಿಕ್ಷಕರು ಹಾಗೂ ವೈದ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಶಿಕ್ಷಕರು ಜೀವನವನ್ನು ರೂಪಿಸುವವರಾದರೆ, ವೈದ್ಯರು ಜೀವ ಕಾಪಾಡುವವರು. ಹೀಗಾಗಿ ಇವೆರಡು ವೃತ್ತಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕಾಗಿದೆ. ಜ್ಞಾನಸುಧಾ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜ್ಜಪ್ಪ ಮನ್ನಿಕೇರಿ ಹೇಳಿದರು.
ಅವರು ಡಿ. 22ರಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿನಾಚರಣೆ-ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌, ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ನಾಡಿಗೆ ನೀಡುತ್ತಿರುವ ಸಂದೇಶ ಅಪೂರ್ವವಾದುದು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅತ್ಯುತ್ತಮ ಫಲಿತಾಂಶ ಪಡೆಯುವ ಇಂತಹ ಶಿಕ್ಷಣ ಸಂಸ್ಥೆ ಕಾರ್ಕಳದಲ್ಲಿರುವುದು ಹೆಮ್ಮೆಯ ವಿಚಾರ. ಸಂಸ್ಥೆ ಕಟ್ಟಿದ ಡಾ. ಸುಧಾಕರ ಶೆಟ್ಟಿ ಮತ್ತವರ ತಂಡದ ಕಾರ್ಯ ಶ್ಲಾಘನೀಯವೆಂದರು.‌

ಎಜೆ ಇನ್ಸ್ಟಿಟ್ಯೂಟ್ ನ ಮೆಡಿಕಲ್ ಸೈನ್ಸ್ ರಿಸರ್ಚ್ ಸೆಂಟರ್‌ ನ ಮೆಡಿಕಲ್ ಸುಪರಿಡೆಂಟ್ ಅಂಡ್ ಪ್ರೊಫೆಸರ್ ಆಫ್ ಫಾರೆನ್ಸಿಕ್ ಮೆಡಿಸಿನ್ ಆಗಿರುವ ಡಾ. ಜಯಪ್ರಕಾಶ ಕೆ ಮಾತನಾಡಿ, ಜೀವನದಲ್ಲಿ ಹಣ ಮುಖ್ಯವಲ್ಲ. ಅದಕ್ಕಿಂತ ಮಿಗಿಲಾದುದು ಮೌಲ್ಯಯುತವಾದ ಬದುಕು. ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೇ ಹೊರತು ಇತರ ವಿಚಾರಗಳಿಗೆ ಅಲ್ಲವೆಂದರು.

92 ಸಾವಿರ ರೂ. ರಕ್ಷಣಾ ನಿಧಿಗೆ
ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ನ ವತಿಯಿಂದ ಇದೇ ಸಂದರ್ಭ 92 ಸಾವಿರ ರೂ. ಮೊತ್ತವನ್ನು ರಾಷ್ಟ್ರದ ರಕ್ಷಣಾ ನಿಧಿಗೆ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರು ಎಂ.ಕೆ. ವಿಜಯ ಕುಮಾರ್‌ ಅವರಿಗೆ ಚೆಕ್‌ ಹಸ್ತಾಂತರಿಸಿದರು.

ಸನ್ಮಾನ
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌, ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡ ಆಪತ್ಭಾಂಧವ ಆಸೀಫ್‍ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ 18, 30, 000 ರೂ. ವಿದ್ಯಾರ್ಥಿ ವೇತನ ನೀಡಲಾಯಿತು.

ಸಂಸ್ಥೆಯ ಟ್ರಸ್ಟಿಗಳಾದ ಕರುಣಾಕರ ಶೆಟ್ಟಿ, ವಿದ್ಯಾವತಿ ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಶಾಂತಿರಾಜ ಜೈನ್, ಡಾ. ಪ್ರಕಾಶ್ ಶೆಣೈ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಉಪಪ್ರಾಂಶುಪಾಲ ಸಾಹಿತ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಪ್ರೌಢ ಶಾಲಾ ವಿಭಾಗದ ಪ್ರಾಂಶುಪಾಲೆ ಉಷಾ ರಾವ್ ಯು., ಉಪಪ್ರಾಂಶುಪಾಲೆ ವಾಣಿ ಕೆ. ಉಪಸ್ಥಿತರಿದ್ದರು. ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿ ಸಂಗೀತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



















error: Content is protected !!
Scroll to Top