ಕಾರ್ಕಳ : ಹರಿಯಾಣ ಮತ್ತು ಪಂಜಾಬ್‌ನ ರೈತರು ರೈತ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಿಜವಾಗಿ ಹೋರಾಟ ನಡೆಸುತ್ತಿರುವುದು ರೈತರಲ್ಲ. ನಗರ ನಕ್ಸಲೀಯರು ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ಧಾಳಿ ಮಾಡಿದರು.
ಡಿ. 22ರಂದು ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕೇಂದ್ರದ ಕೃಷಿ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮುಂಚಿತವಾಗಿ ಸದನಗಳಲ್ಲಿ, ಸದನ ಪ್ರಮುಖರು ಇರುವಂತಹ ಎಗ್ರಿಕಲ್ಚರ್ ಸ್ಟ್ಯಾಂಡಿಂಗ್ ಕಮಿಟಿಯಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ಅನಂತರವೇ ಕಾಯ್ದೆ ರೂಪಿಸಲಾಗಿದೆ. ಅಂದು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷವೂ ಸಹಮತ ವ್ಯಕ್ತಪಡಿಸಿ, ಇದೀಗ ವಿರೋಧಿಸುತ್ತಿವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಉಮಾರ್ ಖಾಲಿದ್ ಬಿಡುಗಡೆಗೆ ಪ್ರತಿಭಟನಕಾರರಿಂದ ಬೇಡಿಕೆ
ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಉಮಾರ್ ಖಾಲಿದ್ ಬಿಡುಗಡೆಗೆ ಆಗ್ರಹಿಸುತ್ತಿದ್ದಾರೆ ಎಂದಾದರೆ ಇವರ ಬೇಡಿಕೆ ಏನೆಂಬುದು ಅರ್ಥವಾಗುತ್ತಿದೆ. ವಿಧಾನ ಸಭಾ ಅಧಿವೇಶನದ ಸಂದರ್ಭವೂ ರೈತ ಮುಖಂಡರು ಪ್ರತಿಭಟನೆ ಮಾಡಿದ್ದರು. ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸುತ್ತಾರೆ. ಹೀಗಾಗಿ ಇದೆಲ್ಲ ರೈತರ ಹೆಸರಲ್ಲಿ ಕಾಂಗ್ರೆಸ್ ಮಾಡುವ ಪಿತೂರಿ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಎಪಿಎಂಸಿ ಕಾಯ್ದೆಗೆ ಬೆಂಬಲ
ಡಿಎಂಕೆ ಪಕ್ಷ 2016ರಲ್ಲಿ ಎಪಿಎಂಸಿ ತಿದ್ದುಪಡಿ ತರುವುದಾಗಿ ಹೇಳಿಕೊಂಡಿತ್ತು. 2010ರಲ್ಲಿ ಕೇಂದ್ರ ಸಚಿವ ಶರತ್ ಪವಾರ್ ಎಪಿಎಂಸಿ ತಿದ್ದುಪಡಿ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸುವ ಸಂದರ್ಭ ರಾಹುಲ್‍ಗಾಂಧಿ, ಅರವಿಂದ ಕೇಜ್ರಿವಾಲ್ ಕೂಡ ತಿದ್ದುಪಡಿಯನ್ನು ಬೆಂಬಲಿಸಿದ್ದರು. ಈಗ ಎಲ್ಲರೂ ಒಟ್ಟಾಗಿ ವಿರೋಧಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈಲ್ವೇ ಯೋಜನೆಗೆ ಪ್ರಯತ್ನ
ಮಂಗಳೂರು-ಕಾರ್ಕಳ-ಶೃಂಗೇರಿ ಸಂಪರ್ಕ ರೈಲ್ವೇ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು. ಡಿ.ವಿ. ಸದಾನಂದ ಗೌಡರು ರೈಲ್ವೇ ಸಚಿವರಾಗಿದ್ದ ವೇಳೆ ಕಡೂರು ಜಂಕ್ಷನ್ ನಿಂದ ಶೃಂಗೇರಿವರೆಗೆ ಸರ್ವೇ ಕಾರ್ಯ ನಡೆಸಲಾಗಿತ್ತು. ಕೇಂದ್ರದಿಂದ ಕಾರ್ಕಳಕ್ಕೆ ಗ್ರಾಮ ಸಡಕ್ ಯೋಜನೆಗಳಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತನೆಗೊಂಡಿದೆ. ಕಸ್ತೂರಿರಂಗನ್ ಯೋಜನೆಯಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶೋಭಾ ವಿವರಿಸಿದರು. ಸರಕಾರದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ನಗರಾಧ್ಯಕ್ಷ ಅನಂತಕೃಷ್ಣ ಶೆಣೈ, ಪುರಸಭಾ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್ ಉಪಸ್ಥಿತರಿದ್ದರು.









