ಕ್ರಿಕೆಟ್ ಕಿಂಡಿ : ಗಿಫ್ಟ್ ಕೊಟ್ಟು ಜಾಹೀರಾತು ಕೇಳಿದ ಪಿವಿಎಸ್ ಬೀಡಿ ಕಂಪೆನಿ

ಕ್ರಿಕೆಟಿಗೂ ತಂಬಾಕು ಉತ್ಪನ್ನಗಳ ಕಂಪೆನಿಗೂ ಮೊದಲಿಂದಲೂ ನಂಟಿದೆ. ವಿಲ್ಸ್ ಸಿಗರೇಟ್ ಬ್ರಾಂಡ್ ನ ಜಾಹೀರಾತು, ಸಿಗರೇಟ್ ಕಾರ್ಡ್ ನಲ್ಲಿ ಕಾಣಿಸಿಕೊಳ್ಳುವುದೆಂದರೆ ಒಂದೊಮ್ಮೆ ಕ್ರಿಕೆಟಿಗರಿಗೆ ಪ್ರತಿಷ್ಠೆಯ ವಿಷಯವಾಗಿತ್ತು.
ವಿಶ್ವ ಪ್ರಸಿದ್ಧ ವಿಲ್ಸ್ ಮಾತು ಬಿಡಿ. ನಮ್ಮೂರಿನ ಬೀಡಿ ಕಂಪನಿ ಕೂಡಾ ಭಾರತೀಯ ಕ್ರಿಕೆಟಿಗರ ನಂಟು ಹೊಂದಿತ್ತು ಎಂದರೆ ನಿಮಗೆ ಆಶ್ಚರ್ಯವಾದೀತು. ಹೌದು, ಮಂಗಳೂರಿನ ಪ್ರಸಿದ್ಧ ಪುತ್ತು ವೈಕುಂಠ ಶೇಟ್ ಸ್ಥಾಪಿಸಿದ ಪಿವಿಎಸ್ ಬೀಡಿಯ ಮಾಲೀಕ ಮುತ್ತು ಶೇಟ್ ಮುಂಬಯಿ ಕ್ರಿಕೆಟ್ ತಂಡಕ್ಕೆ ಡಿನ್ನರ್ ಆಯೋಜಿಸಿದ್ದರು. ಅದು 1970ರ ದಶಕದ ಆರಂಭ. ಗುಜರಾತ್ ವಿರುದ್ಧ ರಣಜಿ ಪಂದ್ಯ ಆಡಲು ಮುಂಬಯಿ ತಂಡ ವಲ್ಸಾಡ್ ಗೆ ಪ್ರಯಾಣ ಬೆಳೆಸಿತ್ತು. ಈ ಪಂದ್ಯದಲ್ಲಿ ಮುಂಬಯಿ ಗೆದ್ದಿತು. ಪ್ರಸಿದ್ಧ ಕ್ರಿಕೆಟಿಗ ಅಜಿತ್ ವಾಡೇಕರ್ ತಂಡದ ಸಾರಥ್ಯ ವಹಿಸಿದ್ದರು. ಮುತ್ತು ಶೇಟ್ ಆಯೋಜಿಸಿದ್ದ ಡಿನ್ನರ್ ನಲ್ಲಿ ನಾಯಕ ಅಜಿತ್ ವಾಡೇಕರ್ ಗೆ ಭರ್ಜರಿ ಗಿಫ್ಟ್ ಕೊಡಲಾಯಿತು. ಅಂದಿನ ಕಾಲಕ್ಕೆ ದುಬಾರಿ ಎನಿಸಿದ್ದ ವಿಡಿಯೋ ಕ್ಯಾಮೆರಾ ಗಿಫ್ಟ್ ರೂಪದಲ್ಲಿ ಅಜಿತ್ ಪಾಲಾಯಿತು. ಅಜಿತ್ ಬಹಳ ಹೆಮ್ಮೆಯಿಂದ ಬೀಗಿದರು. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಮರುದಿನ ಬೆಳಗ್ಗೆ ವರೆಗೆ ಮಾತ್ರ!ಡಿನ್ನರ್ ಹೋಸ್ಟ್ ಮಾಡಿದ್ದ ಪಿವಿಎಸ್ ಬೀಡಿ ಕಂಪನಿ ತನ್ನ ಉತ್ಪನ್ನಗಳ ಜಾಹೀರಾತಿಗೆ ರೂಪದರ್ಶಿಯಾಗುವಂತೆ ಅಜಿತ್ ಗೆ ದುಂಬಾಲು ಬಿತ್ತು. ಆಗಷ್ಟೇ ಅಜಿತ್ ಗೆ ಅರ್ಥವಾಗಿದ್ದು ಹಿಂದಿನ ದಿನದ ದುಬಾರಿ ಗಿಫ್ಟ್ ನ ಮರ್ಮ. ತಮ್ಮ ಅದ್ಭುತ ಫಾರ್ಮ್ ನಿಂದ ಉತ್ತಮ ಹೆಸರು ಮಾಡಿದ್ದ ಅಜಿತ್ ಒಮ್ಮೆ ಕಸಿವಿಸಿಗೊಂಡರು. ಬೀಡಿ ಜಾಹೀರಾತಿಗೆ ಒಲ್ಲೆನೆಂದ ಅಜಿತ್ ಕ್ಯಾಮೆರಾ ಹಿಂದಿರುಗಿಸಿ ಅಲ್ಲಿಂದ ಕಾಲ್ಕಿತ್ತರು.
-ಫೋರ್ತ್ ಅಂಪೈರ್



































































































error: Content is protected !!
Scroll to Top