Wednesday, May 18, 2022
spot_img
Homeಅಂಕಣರಾಜʼಪಥ (ರಾಜೇಂದ್ರ ಭಟ್‌ ಬರಹ)ಇಂದಿನ ಐಕಾನ್ -ಅಲ್ಪ ಕಾಲವೆ ಭೋರ್ಗರೆದ ಅಮೆಜಾನ್ ನದಿ ಶಂಕರನಾಗ್ ಮತ್ತು ಸಾವಿರದ ನೆನಪು

ಇಂದಿನ ಐಕಾನ್ -ಅಲ್ಪ ಕಾಲವೆ ಭೋರ್ಗರೆದ ಅಮೆಜಾನ್ ನದಿ ಶಂಕರನಾಗ್ ಮತ್ತು ಸಾವಿರದ ನೆನಪು

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಏರ್ಪಟ್ಟಿದ್ದ ಒಂದು ಕಾರ್ಯಕ್ರಮವನ್ನು ಆಂಕರ್ ಮಾಡುವ ಭಾಗ್ಯವು ನನಗೆ ಒದಗಿತ್ತು. ಅದು ನನ್ನ ಜೇವನದ ಸ್ಮರಣೀಯ ಕಾರ್ಯಕ್ರಮಗಳಲ್ಲಿ ಒಂದು. ಕನ್ನಡದ ಸ್ಟಾರ್ ನಟ, ನಿರ್ದೇಶಕ, ಕತೆಗಾರ, ನಿರ್ಮಾಪಕ, ಧಾರಾವಾಹಿಗಳ ನಿರ್ದೇಶಕ, ವಿಷನರಿ, ದಾರ್ಶನಿಕ ಮತ್ತು ಮಾನವತಾವಾದಿ ಎಲ್ಲವೂ ಆದ ಶಂಕರನಾಗ್ ಅವರ ಸ್ಮರಣೆಯ ಕಾರ್ಯಕ್ರಮ ಅದು!
ಅಂದು ನವೆಂಬರ್ 9. ಅದು ಶಂಕರನಾಗ್ ಹುಟ್ಟಿದ ಹಬ್ಬ. ಅಲ್ಲಿ ಸೇರಿದವರು ಹೆಚ್ಚಿನವರು ರಿಕ್ಷಾ ಡ್ರೈವರಗಳು. ಅದಕ್ಕೆ ಕಾರಣ ಶಂಕರ್ ಅಭಿನಯಿಸಿದ ‘ಆಟೋ ರಾಜ ‘ ಸಿನಿಮಾ. ಇಂದು ಕರ್ನಾಟಕದಲ್ಲಿ ಓಡಾಡುವ ಕನಿಷ್ಠ 50% ರಿಕ್ಷಾಗಳ ಹಿಂದೆ ಶಂಕರನಾಗ್ ಫೋಟೋ ಸ್ಟಿಕರ್ ಅಥವಾ ಸಿನೆಮಾದ ಹೆಸರುಗಳು ಇವೆ!
ಬೆಂಗಳೂರಿನ ಆ ಕಾರ್ಯಕ್ರಮದಲ್ಲಿ ಶಂಕರನಾಗ್ ಸಿನೆಮಾದ ಆಯ್ದ ಹಾಡುಗಳ ರಸಮಂಜರಿ, ರಮೇಶ್ ಭಟ್, ಮಾಸ್ಟರ್ ಮಂಜುನಾಥ್ ಮೊದಲಾದ ಶಂಕರನಾಗ್ ಒಡನಾಡಿಗಳ ಭಾವಸ್ಪರ್ಷದ ಮಾತುಗಳು, ಶಂಕರನಾಗ್ ಅವರ ಸಿನೆಮಾಗಳ ದೃಶ್ಯ ವೈಭವ ಎಲ್ಲವೂ ಸೇರಿ ಇಬ್ಬನಿಯ ಮಳೆಯಲ್ಲಿ ಅರಮನೆಯ ಮೈದಾನವು ಮಿಂದು ಎದ್ದಿತ್ತು. ಸೇರಿದ್ದ 3500 ರಿಕ್ಷಾ ಚಾಲಕರು ನವಂಬರ್ 9ರ ಆ ದಿನವನ್ನು ‘ಆಟೋರಿಕ್ಷಾ ದಿನ’ ವಾಗಿ ಆಚರಿಸಲು ಅಂದು ನಿರ್ಧಾರ ಮಾಡಿದ್ದರು. ಆ ಕಾರ್ಯಕ್ರಮವು ಕಳೆದ 25 ವರ್ಷಗಳಿಂದ ನಿರಂತರವಾಗಿ ಅಲ್ಲಿ ನಡೆದುಕೊಂಡು ಬಂದಿದೆ ಎಂದು ಸಂಘಟಕರು ನನಗೆ ಹೇಳಿದ್ದರು.
ಶಂಕರನಾಗ್ ಕೇವಲ ಸಿನೆಮಾ ಫಿಗರ್ ಆಗಿದ್ದರೆ ಅಷ್ಟೊಂದು ಜನರು ಅಲ್ಲಿ ಸೇರಿ ಅವರನ್ನು ಪ್ರೀತಿ ಮಾಡುತ್ತಿರಲಿಲ್ಲ. ಶಂಕರ್ ನಿರ್ಗಮಿಸಿ ಈಗಾಗಲೇ 30 ವರ್ಷಗಳು ಸಂದಿವೆ. ಆದರೆ ಕರ್ನಾಟಕದ ಕೆಳಮಧ್ಯಮ ವರ್ಗದ ಶ್ರಮಿಕ, ಕಾಯಕ ಸಂಸ್ಕೃತಿಯನ್ನು ನಂಬುವ ಜನರಿಗೆ ಅವರು ಇಂದಿಗೂ ಐಕಾನ್! ಶಂಕರ್ ನಮ್ಮೊಂದಿಗೆ ಇಲ್ಲ ಎಂದು ನಂಬಲು ಅವರ್ಯಾರೂ ಸಿದ್ಧರಿಲ್ಲ! ಶಂಕರ್ ಮಾಡಿದ್ದ ಹೆಚ್ಚಿನ ಪಾತ್ರಗಳು ಶ್ರಮಿಕ ಸಂಸ್ಕೃತಿಯ ಪ್ರತೀಕವಾದ ಪಾತ್ರಗಳು. ಅವರು ಬದುಕಿದ್ದು ಕೂಡ ಹಾಗೆ! ಒಂದು ನಿಮಿಷವನ್ನು ಕೂಡ ವ್ಯರ್ಥ ಮಾಡದ ಹಾಗೆ ನಿರಂತರ ಓಡಿದ ಮಿಂಚಿನ ಓಟ ಅವರದ್ದು. 12 ವರ್ಷಗಳ ಅವಧಿಯಲ್ಲಿ ಅವರು ಅಭಿನಯಿಸಿದ ಸಿನೆಮಾಗಳ ಸಂಖ್ಯೆ 100ಕ್ಕಿಂತ ಹೆಚ್ಚು! ಒಂದು ರೀತಿ ವರ್ಕ್ ಹೋಲಿಕ್ ವ್ಯಕ್ತಿತ್ವ. ಅವರು ಮಲಗಿದ್ದೆ ಕಡಿಮೆ.
“ನನ್ನನ್ನು ಸ್ಟಾರ್ ಎಂದು ಕರೆಯುವುದು ಬೇಡ. ಕಲಾವಿದ ಎಂದರೆ ಸರಿ” ಎನ್ನುತ್ತಿದ್ದರು ಶಂಕರನಾಗ್. ಅವರು ನಿರ್ದೇಶನ ಮಾಡಿದ ಮಿಂಚಿನ ಓಟ, ಆಕ್ಸಿಡೆಂಟ್, ನೋಡಿ ಸ್ವಾಮಿ ನಾವಿರೋದು ಹೀಗೆ, ಒಂದು ಮುತ್ತಿನ ಕಥೆ…. ಮೊದಲಾದ ಸಿನೆಮಾಗಳು ಆಗಿನ ಕಾಲಕ್ಕಿಂತ ಅಡ್ವಾನ್ಸ್ ಆಗಿದ್ದವು. ಸ್ಕ್ರಿಪ್ಟ್ ರಚನೆಯಿಂದ ಆರಂಭಿಸಿ ಚಿತ್ರೀಕರಣದವರೆಗೆ ಎಲ್ಲವೂ ಅವರದ್ದೇ ಸ್ಪರ್ಶ. ಅವರ ಸಿನೆಮಾಗಳಲ್ಲಿ ಅವರು ಉದಿಸಿ ಬಂದ ಮರಾಠಿ ರಂಗಭೂಮಿಯ ದಟ್ಟ ಪ್ರಭಾವ ಕಾಣಬಹುದು. ಸಿನೆಮಾದ ನಡುವಿನ ಬಿಡುವಿನಲ್ಲಿ ಕೂಡ ನಾಟಕಗಳಲ್ಲಿ ಅಭಿನಯಿಸಿ ಬರುತ್ತಿದ್ದರು ಶಂಕರನಾಗ್. “ಸಿನಿಮಾಕ್ಕೆ ಇರುವ ಎಲ್ಲಾ ಸಾಧ್ಯತೆಗಳೂ ನಾಟಕಕ್ಕೆ ಇವೆ. ಆದರೆ ನಾಟಕಕ್ಕೆ ಇರುವ ಸಾಧ್ಯತೆಗಳು ಸಿನೆಮಾಕ್ಕೆ ಇಲ್ಲ!” ಸಂದರ್ಶನದಲ್ಲಿ ಶಂಕರ್ ಹೇಳಿದ್ದರು.
ಶಂಕರನಾಗ್ ಒಬ್ಬ ಮೇರು ನಟನಾಗಿ ನಮಗೆ ತುಂಬಾ ಇಷ್ಟ ಆಗ್ತಾರೆ. ಅದಕ್ಕಿಂತ ಅವರು ನಿರ್ದೇಶಕರಾಗಿ ನಮಗೆ ಹೆಚ್ಚು ಇಷ್ಟ ಆಗ್ತಾರೆ. ಅವರು ಮಾಡಿದ ಅಷ್ಟೂ ಸಿನೆಮಾಗಳು ಕೂಡ ಪ್ರಯೋಗಾತ್ಮಕ ಆದ ಚಿತ್ರಗಳು. ಭಾರತದಲ್ಲೇ ಮೊದಲ ಅಂಡರ್ ವಾಟರ್ ಚಿತ್ರೀಕರಣ ಮಾಡಿದ, ರಾಜಕುಮಾರ್ ಅಭಿನಯಿಸಿದ ಚಿತ್ರ ‘ಒಂದು ಮುತ್ತಿನ ಕಥೆ’ ಆಗಿರಬಹುದು, ಜೈಲಿಂದ ತಪ್ಪಿಸಿಕೊಂಡು ಬಂದ ಎರಡು ಪಡ್ಡೆ ಹುಡುಗರ ಕಥೆ ‘ಮಿಂಚಿನ ಓಟ’ ಆಗಿರಬಹುದು, ಮುಂಬೈಯಲ್ಲಿ ರಾಜಕಾರಣಿಯ ಮಗ ನಡೆಸಿದ ಫುಟ್‌ ಪಾತ್ ಆಕ್ಸಿಡೆಂಟ್ ಕತೆ ಹೊಂದಿದ್ದ ‘ಆಕ್ಸಿಡೆಂಟ್’ ಆಗಿರಬಹುದು, ಬೀದಿ ಬದಿಯ ಕನಸು ಕಟ್ಟುವ ‘ನೋಡಿ ಸ್ವಾಮಿ ನಾವಿರೋದು ಹೀಗೆ’ ಜನ್ಮ ಜನ್ಮಾಂತರದ ಕಥೆ ಹೊತ್ತ ‘ಜನ್ಮ ಜನ್ಮದ ಅನುಬಂಧ’, ಕ್ಯಾನ್ಸರ್ ಪೀಡಿತ ಪ್ರಿಯತಮೆಯನ್ನು ಬದುಕಿಸಲು ಹೆಣಗಾಡುವ ಪ್ರೇಮಿಯ ಕಥೆ ಹೊತ್ತ ‘ಗೀತಾ’…ಇವೆಲ್ಲವೂ ಸಾರ್ವಕಾಲಿಕವಾದ ಕ್ಲಾಸಿಕ್ ಚಿತ್ರಗಳು. ಅವರ ಸ್ಕ್ರಿಪ್ಟ್, ಕ್ಯಾಮೆರಾ ಕೆಲಸ, ಸರಸವಾದ ನಿರೂಪಣೆ ಎಲ್ಲವೂ ಮಾಸ್ಟರ್ ಪೀಸ್ ಆಗಿವೆ. ಅವರು ನಿರ್ದೇಶನ ಮಾಡಿದ ‘ಮಾಲ್ಗುಡಿ ಡೇಸ್’ ಧಾರಾವಾಹಿಯು ಡಿಡಿ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರ ಆಗಿತ್ತು. ಅದು ಉಂಟು ಮಾಡಿದ ಸಂಚಲನ ಬೇರೆ ಯಾವ ಧಾರಾವಾಹಿ ಕೂಡ ಈವರೆಗೆ ಮಾಡಿಲ್ಲ ಎಂದು ದಾಖಲೆಗಳು ಹೇಳುತ್ತವೆ!
ಶಂಕರ್ ಅವರ ಕನ್ನಡಪರ ಆದ ಪ್ರೀತಿ, ಕರ್ನಾಟಕದ ಬಗ್ಗೆ ಅವರಿಗೆ ಇದ್ದ ವಿಷನ್, ಮೆಟ್ರೋ ರೈಲು ಕನಸು, ಬಡವರಿಗಾಗಿ ಸಣ್ಣ ಬಜೆಟ್ ಮನೆಗಳು, ಕಂಟ್ರಿ ಕ್ಲಬ್, ಸಂಕೇತ್ ಸ್ಟುಡಿಯೋ, ಕೆಮ್ಮಣ್ಣು ಗುಂಡಿಯ ರೋಪ್ ವೇ ಕನಸು ಎಲ್ಲವನ್ನು ನೆನಪು ಮಾಡಿಕೊಂಡಾಗ ಖಂಡಿತ ರೋಮಾಂಚನ ಆಗುತ್ತದೆ. ಅವರ ಶಿಕ್ಷಣ ಪ್ರೇಮ, ಮಾನವೀಯ ಮುಖಗಳು ಮೊಗೆದಷ್ಟೂ ಮುಗಿದು ಹೋಗುವುದಿಲ್ಲ. ಕೇವಲ 36 ವರ್ಷ ಬದುಕಿದ್ದ ಶಂಕರನಾಗ್ ಇಷ್ಟೊಂದು ಸಾಧನೆ ಹೇಗೆ ಮಾಡಿದರು ಎನ್ನುವುದನ್ನು ನೆನೆಯುವಾಗ ಅಚ್ಚರಿ ಮೂಡುತ್ತದೆ! ಅದಕ್ಕಿಂತ ಹೆಚ್ಚಾಗಿ ಶಂಕರ್ ಇಂದು ಬದುಕಿದ್ದರೆ ಕನ್ನಡ ಸಿನೆಮಾ ರಂಗ ಎಷ್ಟು ಶ್ರೀಮಂತವಾಗಿ ಮೆರೆಯುತ್ತಿತ್ತು ಎಂದು ನೆನೆದಾಗ ರೋಮಾಂಚನ ಆಗುತ್ತದೆ. ತನ್ನ ತಮ್ಮನ ಬಗ್ಗೆ ಅನಂತನಾಗ್ ಬರೆದ ‘ನನ್ನ ತಮ್ಮ ಶಂಕರ’ ಪುಸ್ತಕವನ್ನು ಓದುತ್ತಾ ಹೋದಂತೆ ನನಗೆ ಅರಿವಿಲ್ಲದೆ ಕಂಬನಿ ಸುರಿಯುತ್ತದೆ.

ಶಂಕರನಾಗ್ ಬಗ್ಗೆ ಇಷ್ಟೊಂದು ಬರೆಯಲು ಕಾರಣ ನನ್ನೂರು ಕಾರ್ಕಳದ ಶಂಕರನಾಗ್ ಅಭಿಮಾನಿ ಬಳಗದವರು. ಕನ್ನಡ ಸಾಹಿತ್ಯ ಪರಿಷತ್ತು ಸ್ಥಳೀಯ ಘಟಕಗಳು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿವೆ. ಇವರೆಲ್ಲರೂ ಒಂದೆಡೆ ಸೇರಿ ಶಂಕರನನ್ನು ನೆನಪಿಸುವ ಮತ್ತು ಶ್ರದ್ಧಾಂಜಲಿ ಅರ್ಪಿಸುವ ಒಂದು ಕಾರ್ಯಕ್ರಮವನ್ನು ನ. 28 ಸಂಜೆ ನಾಲ್ಕು ಗಂಟೆಗೆ ಕಾರ್ಕಳದಲ್ಲಿ ಏರ್ಪಡಿಸಿದ್ದಾರೆ. ಕಾರ್ಕಳದ ಶ್ರೀ ಭುವನೇಂದ್ರ ಪ್ರೌಢಶಾಲೆಯಲ್ಲಿ “ಶಂಕರಾಭರಣ- ಇದು ಶಂಕರನ ಸ್ಮರಣೆ” ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವು ವೇದಿಕೆ ಏರಲಿದೆ. ಅಲ್ಲಿ ಶಂಕರನಾಗ್ ಸಿನೆಮಾದ ಸೊಗಸಾದ ಹಾಡುಗಳನ್ನು ಕೀರ್ತಿ ಪಡೆದ ಕಲಾವಿದರು ಹಾಡಲಿದ್ದಾರೆ. ಅದರ ಜೊತೆಗೆ ಕಾರ್ಕಳದ ಬಿಇಒ ಶಶಿಧರ ಸರ್ ಅವರು ಶಂಕರನಾಗ್ ಬಗ್ಗೆ ಇದುವರೆಗೆ ಎಲ್ಲೂ ಅನಾವರಣ ಆಗದ ಮಾಹಿತಿಗಳನ್ನು ಸಂಗ್ರಹಿಸಿ ಕೊಡಲಿದ್ದಾರೆ. ಸುಂದರವಾದ ಧ್ವನಿ ಬೆಳಕಿನ ವೇದಿಕೆಯಲ್ಲಿ ಶಂಕರನಾಗ್ ದ್ವಾದಶ ಅವತಾರಿ ಆಗಿ ಮೂಡಿ ಬರಲಿದ್ದಾರೆ. ಸ್ಥಳೀಯ ‘ನಮ್ಮ ಕಾರ್ಲ’ ಟಿವಿಯ ನೇರ ಪ್ರಸಾರ ಹಾಗೂ fb ಲೈವ್ ಕೂಡ ಇರುತ್ತವೆ. ಕನ್ನಡದ ಶ್ರೀಮಂತವಾದ ಮನಸ್ಸುಗಳು, ಶಂಕರನಾಗ್ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಮ್ಮ ಪ್ರೀತಿಯ ಕೋರಿಕೆ.
ರಾಜೇಂದ್ರ ಭಟ್ ಕೆ.

ರಾಜೇಂದ್ರ ಭಟ್‌ ಕೆ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!