Saturday, September 25, 2021
spot_img
Homeಸಂವಾದಬಾಲ ಭಿಕ್ಷಾಟನೆ ಎಂಬ ಪಿಡುಗಿಗೆ ಪರಿಹಾರ ಎಂದು?

ಬಾಲ ಭಿಕ್ಷಾಟನೆ ಎಂಬ ಪಿಡುಗಿಗೆ ಪರಿಹಾರ ಎಂದು?

ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ಮಕ್ಕಳಿಗೂ ಅನ್ವಯಿಸುತ್ತವೆ. ಮಕ್ಕಳಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಎಲ್ಲ ಮಕ್ಕಳನ್ನು ಎಲ್ಲರೂ ಎಲ್ಲ ಸಂದರ್ಭದಲ್ಲೂ ಸಮಾನವಾಗಿ ಪರಿಗಣಿಸಬೇಕು ಮತ್ತು ಮಕ್ಕಳ ಘನತೆಗೆ ಕುಂದುಂಟಾಗಬಾರದು. ಮಕ್ಕಳನ್ನು ದುಡಿಮೆಗೆ ದೂಡಬಾರದು, ಬದಲಿಗೆ ಮಕ್ಕಳನ್ನು ಶಾಲಾ ಶಿಕ್ಷಣಕ್ಕೆ ತೊಡಗಿಸಬೇಕು ಎಂದು ನಮ್ಮ ಸಂವಿಧಾನ ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಾನೂನು ವಿರುದ್ಧದ ಕೆಲಸದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮಾಫಿಯಾಗೆ ಅಂತ್ಯವಿಲ್ಲದಂತಾಗಿದೆ.ಹಣಗಳಿಸುವ ವ್ಯಾಮೋಹಕ್ಕೆ ಬಿದ್ದಿರುವ ಪಾತಕಿಗಳು ಯಾವುದೋ ಮಹಿಳೆಯ ಕಂಕುಳಲ್ಲಿ ಇನ್ಯಾರದ್ದೋ ಕೂಸನಿಟ್ಟು ಭಿಕ್ಷೆಗೆ ತಳ್ಳುತ್ತಿರುವ ಜಾಲ ವ್ಯಾಪಕವಾಗಿದೆ.
ಭಿಕ್ಷಾಟನೆ ನಿಗ್ರಹಕ್ಕೆ ಕಾನೂನು ಇದೆ, ಆದರೆ ಭಿಕ್ಷೆ ಬೇಡುವುದು ಶಿಕ್ಷಾರ್ಹ ಅಪರಾಧ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲದ ವಿಚಾರ. ಮಕ್ಕಳ ಕಳ್ಳರ ಜಾಲ ವ್ಯಾಪಕವಾಗಿ ಹರಡಿದೆ.ಹುಟ್ಟಿದ ಮಕ್ಕಳನ್ನು ಕದ್ದು ಆ ಮಗುವನ್ನು ತೋರಿಸಿ ಭಿಕ್ಷೆ ಬೇಡುತ್ತಾರೆ. ಮೂರರಿಂದ ಆರನೇ ವಯಸ್ಸಿನ ಮಕ್ಕಳನ್ನು ಅಪಹರಿಸಿ ಅವರಿಗೆ ಭಿಕ್ಷೆ ಬೇಡುವ ತರಬೇತಿ ನೀಡಿ ಬಳಸಿಕೊಳ್ಳುತ್ತಿದ್ದಾರೆ. ಆರರಿಂದ ಒಂಬತ್ತನೆಯ ವಯಸ್ಸಿನ ಮಕ್ಕಳಿಗೆ ಡ್ರಗ್ಸ್ ಮಾರಾಟ ಮಾಡುವ ತರಬೇತಿ ನೀಡುತ್ತಿದ್ದಾರೆ. 14 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳನ್ನು ಅಪಹರಿಸಿ, ಬೆದರಿಸಿ ವೇಶ್ಯಾವಾಟಿಕೆಗೆ ದೂಡುವ ಮಾಫಿಯಾ ಇದೆ.
ಜನದಟ್ಟಣೆ ಹೆಚ್ಚಾಗಿರುವ ಪ್ರದೇಶ,ಸಂಚಾರ ದಟ್ಟಣೆ ಹೆಚ್ಚಿರುವ ಪ್ರದೇಶಗಳು, ಜಾತ್ರೆ ಉತ್ಸವಗಳು ನಡೆಯುವ ಊರುಗಳನ್ನು ಪಟ್ಟಿ ಮಾಡಿ ಮಾಫಿಯಾದ ಸೂತ್ರಧಾರರು ಬಾಡಿಗೆ ತಾಯಂದಿರು ಅಮಾಯಕ ಮಕ್ಕಳನ್ನು ಬಳಸಿಕೊಂಡು ದುಡ್ಡು ಸಂಪಾದಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯ ವಿದ್ಯಮಾನಗಳ ಬಗ್ಗೆಯೂ ದಂಧೆಕೋರರು ಅಧ್ಯಯನ ನಡೆಸುತ್ತಿದ್ದಾರೆ. ತಮ್ಮ ಏಜೆಂಟ್ ಗಳ ಮೂಲಕ ಮಹಿಳೆಯರು, ಮಕ್ಕಳನ್ನು ಆ ಭಾಗಗಳಲ್ಲಿ ಬಿಡುತ್ತಾರೆ.
ಭಿಕ್ಷಾಟನೆ ಮಾಫಿಯಾ ಹೆಚ್ಚಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಪಾತಕಿಗಳು ಕೋಟ್ಯಂತರ ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಮಕ್ಕಳು ಭಿಕ್ಷೆ ಬೇಡಿದ ಹಣ ನೀಡದಿದ್ದರೆ ಅಂತಹವರ ಮೇಲೆ ಆ್ಯಸಿಡ್ ದಾಳಿ ಇಲ್ಲವೇ, ಕೈಕಾಲು ಊನ ಮಾಡುವ ಕೃತ್ಯ ಎಸಗುತ್ತಾರೆ.
ಭಿಕ್ಷಾಟನೆ ತಡೆ ಹಿಡಿಯಲು ನಾವು ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:
1)ಕೆಲಸ ಮಾಡುವ ಸಾಮರ್ಥ್ಯ ಇರುವವರಿಗೆ ನಿರ್ದಾಕ್ಷಿಣ್ಯವಾಗಿ ಭಿಕ್ಷೆ ಕೊಡಲು ನಿರಾಕರಿಸಬೇಕು.
2) ವೃದ್ಧರನ್ನು ಅವರ ಮಕ್ಕಳ ಮನವೊಲಿಸಿ ಪಾಲನೆಯ ಹೊಣೆ ಹೊರಿಸಬೇಕು.
3)ಮಕ್ಕಳ ಕೈಗೆ ಹಣ ಕೊಡದೆ ಆಹಾರ, ಬಟ್ಟೆ ಮಾತ್ರ ನೀಡುವ ಮೂಲಕ ಇದು ಒ೦ದು ದಂಧೆ ಆಗದಂತೆ ತಡೆಯಬೇಕು.
4) ಮಕ್ಕಳು ದುಡ್ಡಿಗೆ ಕೈ ಚಾಚುತ್ತಿರುವುದು ಕಂಡುಬಂದರೆ ಅವರ ಪೂರ್ವಾಪರ ವಿಚಾರಿಸಿ, ಅನುಮಾನ ಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
5) ಭಿಕ್ಷುಕರು ಈ ಸಮಾಜದ ನತದೃಷ್ಟ ಶಿಶುಗಳು. ಅವರ ಬಗ್ಗೆ ಕಳಕಳಿ- ಕನಿಕರ ಇರಲಿ ಆದರೆ ಅವರನ್ನು ಉತ್ತೇಜಿಸುವುದು ಬೇಡ.
ಭಿಕ್ಷಾಟನೆ ಎಂಬುದು ನಮ್ಮ ಸಮಾಜಕ್ಕೆ ಅಂಟಿದ ಶಾಪ. ಬಡತನ, ಅನಕ್ಷರತೆ, ಅನಾಥಪ್ರಜ್ಞೆ ಇತ್ಯಾದಿ ಯಾವುದೋ ಕಾರಣಗಳಿಂದ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಇಂತಹ ಮಕ್ಕಳನ್ನು ಗುರುತಿಸಿ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಇತ್ಯಾದಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದಲ್ಲಿ ಇಂತಹ ಮಕ್ಕಳು ಅನಗತ್ಯವಾಗಿ ಭಿಕ್ಷೆ ಬೇಡುವುದನ್ನು ತಡೆಯಬಹುದು.ಈ ರೀತಿ ಈ ಮಕ್ಕಳು ಭವ್ಯಭಾರತದ ಸತ್ಪ್ರಜೆಗಳಾಗಿ ಬೆಳೆಯುವಲ್ಲಿ ನಮ್ಮ ಕಾಣಿಕೆಯನ್ನು ನಾವು ನೀಡೋಣ.
ಅನನ್ಯಾ ಎಸ್. ನಾಯಕ್
(ಹತ್ತನೇ ತರಗತಿ ವಿದ್ಯಾರ್ಥಿನಿ – ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ, ಕಾರ್ಕಳ)

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!