ಕಗ್ಗದ ಸಂದೇಶ – ಮುಕ್ತರಾದರೆ ಜೀವನ ಸಾರ್ಥಕ

“ಎಲ್ಲರೊಳು ತಾನು ತನ್ನೊಳು ಎಲ್ಲರಿರುವವೋ|
ಎಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ||
ಬೆಲ್ಲ ಲೋಕಕ್ಕಾಗಿ ತನಗೆ ತಾನ್ ಕಲ್ಲಾಗ |
ಬಲ್ಲವನೆ ಮುಕ್ತನಲ -ಮಂಕುತಿಮ್ಮ”.

ಜಗತ್ತಿನಲ್ಲಿರುವ ಎಲ್ಲರಲ್ಲಿಯೂ ನಾನಿದ್ದೇನೆ.ನನ್ನೊಳಗೆ ಜಗತ್ತಿನ ಎಲ್ಲರೂ ಇದ್ದಾರೆ ಎನ್ನುವ ಭಾವನೆಯೊಂದಿಗೆ ಎಲ್ಲಾ ಕಡೆಯೂ ನೋಡಿ ನಡೆಯಬೇಕು. ಸಂತೋಷದಲ್ಲಿರುವವರನ್ನು ಕಂಡು ಆನಂದಪಡುತ್ತಾ, ದುಃಖದಲ್ಲಿರುವವನ್ನು ಕಂಡು ಮರುಗುತ್ತಾ ಹೊರ ಜಗತ್ತಿಗೆ ಬೆಲ್ಲವಾಗಿ ತನ್ನೊಳಗೆ ತಾನು ಕಲ್ಲಿನಂತೆ ಗಟ್ಟಿಯಾಗಿರುವವನೆ ಮುಕ್ತ ಜೀವಿ ಎಂದು ಮಾನ್ಯ ಗುಂಡಪ್ಪನವರು ಈ‌ ಮುಕ್ತಕದಲ್ಲಿ ಹೇಳಿದ್ದಾರೆ.
‘ವಸುದೈವ ಕುಟುಂಬಕಂ’ ಎಂಬ ಮಾತಿನಂತೆ ಇಡೀ ಜಗತ್ತೇ ಒಂದು ಕುಟುಂಬ.ಜಗತ್ತಿನಲ್ಲಿ ಇರುವವರೆಲ್ಲರೂ ನಮ್ಮ ಬಂಧುಗಳು, ಇವರಲ್ಲಿ ಯಾರಿಗೆ ನೋವಾದರೂ ನಮಗೆ ನೋವಾಗುತ್ತದೆ. ಸಂತೋಷವಾದರೆ ನಮಗೂ ಸಂತೋಷವಾಗುತ್ತದೆ.ಇದು ಸಮಷ್ಟಿಯಲ್ಲಿರುವವರೆಲ್ಲರೂ ಒಂದು ಎಂದು ಹೇಳುತ್ತದೆ.ಮುಕ್ತನಾದವನು ಸುಖ ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಾನೆ. ಹೊರಗೆ ಹೂವಿನಂತೆ ಮೃದುವಾಗಿ ನಗುವಿನಿಂದ ಘಮಘಮಿಸುತ್ತಾ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾನೆ. ಇರುವೆಗಳು ಬೆಲ್ಲವನ್ನು ಮುತ್ತುವಂತೆ ಸದಾ ಜನರಿಂದ‌ ಆವೃತನಾಗಿರುತ್ತಾನೆ.ಆದರೆ ಅಂತರಂಗದಲ್ಲಿ ಕಲ್ಲಿನಂತೆ ಗಟ್ಟಿಯಾಗಿರುತ್ತಾನೆ.ಶಿಲೆಯ ತಲೆ ಮೇಲೆ ಬಿದ್ದ ಎಲ್ಲವೂ ಕೆಳಗೆ ಬೀಳುವಂತೆ ಯಾವ ಭಾವನೆಗಳಿಗೂ ವಿಚಲಿತನಾಗದೆ, ಯಾವುದನ್ನು ಅಂತರಂಗದೊಳಗೆ ತೆಗೆದುಕೊಳ್ಳದೆ ಕಲ್ಲಿನಂತೆ ಗಟ್ಟಿಯಾಗಿರುತ್ತಾನೆ.

“ಮುಳ್ಳಿರದೆಯೆ ಹೂವಿದೆಯೆ ನೋವಿರದೆಯೆ ಬದುಕಿದೆಯೆ? ನೋವೆಂದು ಕುಂದಿದರೆ ನಾಳೆ ನಗೆ ಎಲ್ಲಿ? ಕುಡಿದು ಬೇವಿನ ರಸ ತೋರು ಸಂತಸವ ಮೊಗದಿ. ಸಮಯವೆ ನಿರ್ವಾಣ – ಮದ್ದುರಾಮ” ಎಂಬ ಕೆ.ಶಿವಪ್ಪನವರ ನುಡಿಯಂತೆ ಜೀವನವೆನ್ನುವುದು ನೋವು ನಲಿವಿನ ಮಿಶ್ರಣ.ನೋವನ್ನು ನುಂಗಿ ನಕ್ಕಾಗಲೇ ಬದುಕು ಸ್ವಾದಿಷ್ಟವಾಗುವುದು. ಇಲ್ಲಿ ಯಾವುದೂ ಶಾಶ್ವತವಲ್ಲ.ಪ್ರತಿಯೊಂದಕ್ಕೂ ಸಮಯದ ಮಿತಿಯಿದೆ.ಕಾಲ ಎಲ್ಲವನ್ನು ಮರೆಸುತ್ತದೆ.ಗಾಳಿ ಸುವಾಸನೆ ಮತ್ತು ದುರ್ವಾಸನೆ ಎರಡನ್ನು ಹೊತ್ತು ತರುತ್ತದೆ. ಆದರೆ ಆ ಎರಡು ಅದರ ಗುಣವಲ್ಲ ಮತ್ತು ಯಾವುದನ್ನು ತನಗೆ ಅಂಟಿಸಿಕೊಳ್ಳುವುದಿಲ್ಲ.ಬದುಕಿನಲ್ಲಿ ನಾವು ಕೂಡ ಯಾವುದಕ್ಕೂ ಅಂಟಿಕೊಳ್ಳದೆ ಮುಕ್ತರಾದಾಗ ಜೀವನ ಸಾರ್ಥಕವೆನಿಸುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷರು



































































































error: Content is protected !!
Scroll to Top