ಧನಲಕ್ಷ್ಮೀಯ ಕೃಪೆ ನಮ್ಮೆಲ್ಲರಿಗೆ ಇರಲಿ

ಲಕ್ಷ್ಮೀಯು ಸಮುದ್ರ ಮಥನದ ಹೊತ್ತಿನಲ್ಲಿ ಕ್ಷೀರ ಸಾಗರದ ನಡುವಿನಿಂದ ಎದ್ದು ಬಂದವಳು. ತಾವರೆಯ ದಳದಲ್ಲಿ ಕುಳಿತವಳು. ಅವಳ ಸೌಂದರ್ಯಕ್ಕೆ ಮಾರು ಹೋಗಿ ಮಹಾವಿಷ್ಣು ಆಕೆಯನ್ನು ಮದುವೆ ಆದ ಕಾರಣ ಅವಳು ವಿಷ್ಣು ಪತ್ನಿ. ವೈಷ್ಣವಿ. ಆಕೆ ಸಂಪತ್ತು, ಆಯಸ್ಸು, ತೇಜಸ್ಸು, ಸೌಂದರ್ಯ,ಶಕ್ತಿ ಮತ್ತು ಸಂತಾನದ ಅಧಿದೇವತೆ. ಅಷ್ಟ ಲಕ್ಷ್ಮಿಯರು ಅಷ್ಟ ಸಂಪತ್ತನ್ನು ನಮಗೆ ಧಾರೆ ಎರೆಯುವಳು. ಗಜಲಕ್ಷ್ಮಿ, ಆದಿಲಕ್ಷ್ಮೀ, ಧನ ಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂತಾನ ಲಕ್ಷ್ಮಿ , ವೀರಲಕ್ಷ್ಮೀ, ವಿದ್ಯಾಲಕ್ಷ್ಮೀ, ವಿಜಯಲಕ್ಷ್ಮಿ ಮೊದಲಾದವುಗಳು ಅಷ್ಟಲಕ್ಷ್ಮಿಯ ಎಂಟು ರೂಪಗಳು ಮತ್ತು ಎಂಟು ಶಕ್ತಿಗಳು. ನಮ್ಮ ಪೂರ್ವಜರು ಬರೇ ಹಣ ಅಥವಾ ದುಡ್ಡನ್ನು ಸಂಪತ್ತು ಎಂದು ಭಾವಿಸಿದವರು ಅಲ್ಲ! ಧಾನ್ಯ, ವೀರತೆ, ಸಂತಾನ, ವಿದ್ಯೆ, ವಿಜಯ ಇತ್ಯಾದಿಗಳನ್ನು ಕೂಡ ಸಂಪತ್ತು ಎಂದು ಕರೆದರು. ಅದೇ ರೀತಿ ಆರಾಧನೆ ಮಾಡಿದರು ಕೂಡ. ಧನಲಕ್ಷ್ಮಿ ಸಂಪತ್ತಿನ ಅಧಿದೇವತೆ. ನಮ್ಮ ಹಿರಿಯರು ( ಈಗಲೂ ಕೂಡ) ದೀಪಾವಳಿ ಹಬ್ಬದಿಂದ ದೀಪಾವಳಿಗೆ ಲೇವಾದೇವಿ ಮುಗಿಸುತ್ತಿದ್ದರು. ಈಗಲೂ “ದೀಪಾವಳಿ ಬಂತು, ನಿನ್ನ ಸಾಲ ಚುಕ್ತಾ ಮಾಡು” ಎಂದು ಹೇಳುವ ಮಾತನ್ನು ನಾವು ಕೇಳುತ್ತೇವೆ. ಪುರಂದರದಾಸರು ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂಬ ಹಾಡಿನ ಮೂಲಕ ನಮ್ಮೊಳಗೆ ಲಕ್ಷ್ಮಿಯ ಆವಾಹನೆ ಹೇಗಾಗಬೇಕು ಎಂದು ಬಹಳ ಸುಂದರವಾಗಿ ವರ್ಣನೆ ಮಾಡಿದ್ದಾರೆ. ಕಲಶ ಮಧ್ಯದಲ್ಲಿ ಲಕ್ಷ್ಮಿಯನ್ನು ಆವಾಹನೆ ಮಾಡಿ, ಧಾನ್ಯದ ರಾಶಿಯ ಮಧ್ಯೆ ಕಲಶ ಸ್ಥಾಪನೆ ಮಾಡಿ ಧನಲಕ್ಷ್ಮಿಯ ಪೂಜೆ ನಡೆಯುತ್ತದೆ. ಧನಲಕ್ಷ್ಮಿಯು ನಮ್ಮ ಆರ್ಥಿಕ ಆರೋಗ್ಯವನ್ನು ಕಾಪಾಡಲಿ ಎನ್ನುವ ಆಶಯ ನಮ್ಮದು.



































































































error: Content is protected !!
Scroll to Top