ನಮ್ಮೊಳಗೊಬ್ಬ ನರಕಾಸುರ…

ಪ್ರಾಗ್ಜೋತಿಷ್ಯಪುರ ನಗರವನ್ನು ಆಳುತ್ತಿದ್ದ ನರಕಾಸುರ ಬಹು ದೊಡ್ಡ ದೈವಭಕ್ತ ಆಗಿದ್ದ. ಆದರೆ ತಲೆಗೆ ಅಡರಿದ ಹುಂಬತನ, ದುರಹಂಕಾರ ಮತ್ತು ದುರಭಿಮಾನ ಅವನನ್ನು ಸರ್ವನಾಶ ಮಾಡಿತು.
ಅವನು ಬ್ರಹ್ಮ ದೇವರನ್ನು ತಪಸ್ಸಿನಿಂದ ಒಲಿಸಿಕೊಂಡು ಪಡೆದ ವರವೆಂದರೆ ಚಿರಂಜೀವಿತ್ವ. ತಪಸ್ಸಿನ ಫಲವಾಗಿ ಸ್ವಂತಕ್ಕೆ ವರ ಪಡೆಯುವ ದುಷ್ಟ ಮನಸ್ಥಿತಿ ಅದು. ಅತ್ಯಂತ ಅಪಾಯಕಾರಿ. ಋಷಿ ,ಮುನಿಗಳು ತಪಸ್ಸನ್ನು ಆಚರಿಸುವುದು ಲೋಕದ ಕಲ್ಯಾಣಕ್ಕೆ. ನರಕಾಸುರ ತಪಸ್ಸು ಮಾಡಿ ವರ ಪಡೆದದ್ದು ತನ್ನ ಕಲ್ಯಾಣಕ್ಕೆ. ಇದು ಸಜ್ಜನರ ಮತ್ತು ದುರ್ಜನರ ನಡುವಿನ ಪ್ರಮುಖವಾದ ವ್ಯತ್ಯಾಸ.
ದೇವರು ಅಂತಹವರಿಗೆ ವರ ಕೊಡುವಾಗಲೂ ಶರ್ತ ವಿಧಿಸಿ ವರ ಕೊಡುತ್ತಾರೆ. ಜಾಹೀರಾತುಗಳ ಕೊನೆಗೆ Conditions apply ಎಂದು ಟ್ಯಾಗ್ ಲೈನ್ ಹಾಕ್ತಾರಲ್ಲ ಹಾಗೆ! ಕ್ಷತ್ರಿಯ ಕನ್ಯೆಯರಲ್ಲಿ ಜನಿಸಿದ ಮಗುವಿನಿಂದ ಮಾತ್ರ ನಿನಗೆ ಮರಣ ಎನ್ನುವುದು ಅದರ ಟ್ಯಾಗ್ ಲೈನ್! ತಾನು ಚಿರಂಜೀವಿ ಆಗಬೇಕು ಎಂದು ಹೊರಟ ಮನಸ್ಥಿತಿಗೆ ಹೊಳೆದ ಉಪಾಯ ಎಂದರೆ ದೇಶದ ಯಾವುದೇ ಕ್ಷತ್ರಿಯ ಕನ್ಯೆ ಕೂಡ ಹಡೆಯಬಾರದು! ಮದುವೆ ಕೂಡ ಆಗಬಾರದು! ಅದಕ್ಕೆ ಇಡೀ ರಾಷ್ಟ್ರದಲ್ಲಿ ದಿಗ್ವಿಜಯ ಮಾಡಿ ಎಲ್ಲಾ ಕ್ಷತ್ರಿಯ ಕನ್ಯೆಯರನ್ನು ಒಂದೆಡೆ ಜೈಲಿನಲ್ಲಿ ಕೂಡಿ ಹಾಕುವ ಮನಸ್ಥಿತಿ! ಸೆರೆಮನೆಯಲ್ಲಿ ಅವರ ಮೇಲೆ ಸರ್ಪಗಾವಲು ಇಡುವ ಮನಸ್ಥಿತಿ! ಹಾಗೆ ಕೂಡಿ ಇಟ್ಟದ್ದು ಬರೋಬ್ಬರಿ 16,000 ಕನ್ಯೆಯರನ್ನು! ಅವರು ಹಡೆಯುವುದನ್ನು ತಡೆಯುವ ಕ್ರೂರವಾದ ಮನಸ್ಥಿತಿ. ಸೃಷ್ಟಿಯ ನಿಯಮಕ್ಕೆ ವಿರುದ್ಧವಾಗಿ ಹೋಗುವ ಅಪಾಯಕಾರಿ ಮನಸ್ಸು. ಅವರೆಲ್ಲರ ಪ್ರಾರ್ಥನೆ, ಆರ್ತನಾದ ಕೃಷ್ಣ ದೇವರಿಗೆ ತಲುಪಿತು ಅಂತ ಅನ್ನಿಸುತ್ತಿದೆ. ಅಲ್ಲಿಗೆ ನರಕಾಸುರನ ವಧೆಯು ಕ್ಷತ್ರಿಯ ಕುಮಾರನಾದ ಕೃಷ್ಣ ದೇವರಿಂದ ಆಯಿತು. ಶ್ರೀ ಕೃಷ್ಣ ದೇವರು ಗೋಕುಲದಲ್ಲಿ ಬೆಳೆದ ಕಾರಣ ಅವನು ಗೊಲ್ಲ ಎಂದು ನರಕಾಸುರ ಲೆಕ್ಕ ಹಾಕಿರಬೇಕು ಅಥವಾ ಅವನ ದೂತರು ಮಾಡಿದ ಕ್ಷತ್ರಿಯ ಕುಮಾರರ ಗಣತಿಯಲ್ಲಿ ಕೃಷ್ಣ ದೇವರು ಮಿಸ್ ಆಗಿರಬೇಕು! ಅಥವಾ ದೈವ ಸಂಕಲ್ಪವೆ ಹಾಗಿರಬೇಕು.

ದೇವರು ತಪಸ್ಸು ಮಾಡಿದ ಧನುಜರಿಗೆ ವರವನ್ನು ಕೊಡುವಾಗ ಸಾರಾಸಗಟಾಗಿ ವರಗಳನ್ನು ಕೊಡದೆ ಯಾವುದಾದರೊಂದು ಟ್ಯಾಗ್ ಲೈನ್ ಬಾಕಿ ಇಟ್ಟಿರುತ್ತಾನೆ ಮತ್ತು ಅದಕ್ಕೆ ಪೂರಕವಾದ ಸನ್ನಿವೇಶವನ್ನು, ಪಾತ್ರವನ್ನು ಸೃಷ್ಟಿ ಮಾಡಿರುತ್ತಾನೆ. ಇದು ಎಲ್ಲಾ ಪುರಾಣಗಳಲ್ಲಿ ಕಂಡು ಬಂದ ಸತ್ಯ. ಸೆರೆಮನೆಯಿಂದ ಬಿಡುಗಡೆಯಾದ ಎಲ್ಲಾ 16,108 ಕನ್ಯೆಯರು ಕೂಡ “ದೇವಾ, ನಮಗೆ ಮದುವೆ ಆಗುವ ಪ್ರಾಯ ದಾಟಿದೆ. ನಮ್ಮನ್ನು ಇನ್ನು ಯಾರು ಮದುವೆ ಆಗ್ತಾರೆ? ನೀನೇ ನಮ್ಮನು ಉದ್ಧರಿಸಬೇಕು” ಎಂದು ಪ್ರಾರ್ಥನೆ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ದೇವರು ಅವರನ್ನು ಗಾಂಧರ್ವ ವಿಧಿಯಿಂದ ಮದುವೆ ಆಗಿ ಉದ್ಧರಿಸಿದರು ಎಂಬಲ್ಲಿಗೆ ನರಕನ ಕತೆ ಮುಗಿಯುತ್ತದೆ! ಈ ಪ್ರಕರಣದ ಫಲವಾಗಿ ಶ್ರೀ ಕೃಷ್ಣ ದೇವರು ಅಷ್ಟೊಂದು ಕನ್ಯೆಯರನ್ನು ಮದುವೆ ಆಗಬೇಕಾಯಿತು ಎನ್ನುವುದು ಕ್ಲೈಮ್ಯಾಕ್ಸ್! ಈಗ ಒಂದು ಕ್ಷಣ ಯೋಚನೆ ಮಾಡಿ. ಚಿರಂಜೀವಿ ಆಗಬೇಕು, ಕೀರ್ತಿಯನ್ನು ಪಡೆಯಬೇಕು, ಜಗತ್ತನ್ನು ಆಳಬೇಕು, ಬೇರೆಯವರನ್ನು ತುಳಿದಾದರೂ ನಾನು ಬದುಕಬೇಕು ಎನ್ನುವ ನರಕಾಸುರ ನಮ್ಮೊಳಗೂ ಇದ್ದಾನಲ್ಲ! ಏನಕೇನ ಪ್ರಕಾರೆಣ ಪ್ರಸಿದ್ಧ ಪುರುಷೋ ಭವ ಎಂದು ನಮ್ಮ ಹಿರಿಯರು ಹೇಳಿದ್ದು ಸುಳ್ಳೇ?
ರಾಜೇಂದ್ರ ಭಟ್ ಕೆ.

ರಾಜೇಂದ್ರ ಭಟ್‌ ಕೆ


































































































error: Content is protected !!
Scroll to Top