ಕಾರ್ಕಳ : ಕಾರ್ಕಳದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಬಾಹುಬಲಿ ಬೆಟ್ಟ, ಚತುರ್ಮುಖ ಬಸದಿ, ಆನೆಕೆರೆ ಬಸದಿ ಆವರಣದಲ್ಲಿ ಯಾತ್ರಾರ್ಥಿಗಳು, ಭಕ್ತರಿಗೆ ಮುಜುಗರವಾಗುವ ರೀತಿಯಲ್ಲಿ ಕೆಲವೊಂದು ಪ್ರೇಮಿಗಳ ಸುತ್ತಾಟ, ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ನಡೆಯುತ್ತಿದೆ. ಮದ್ಯಪಾನ ಮಾಡುವಂತಹ ದೃಶ್ಯಗಳು ಈ ಪರಿಸರದಲ್ಲಿ ಕಂಡುಬರುತ್ತಿದೆ. ಆದ್ದರಿಂದ, ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ. 5ರಂದು ಕಾರ್ಕಳ ಜೈನ್ ಬ್ರಿಗೇಡ್ ನ ಸದಸ್ಯರು ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಕಾರ್ಕಳ ನಗರ ಪೊಲೀಸ್ ಠಾಣೆ ಎಸ್‌ಐ ಮಧು ಬಿ.ಇ. ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಆನೆಕೆರೆ ಬಸದಿ ಮೊಕ್ತೇಸರ ಉದಯ ಕಡಂಬ, ಪುರೋಹಿತ ಸುನಿಲ್ ಇಂದ್ರ ಹಾಗೂ ಬ್ರಿಗೇಡ್‌ನ ಸದಸ್ಯರಿದ್ದರು.
ನ್ಯೂಸ್ ಕಾರ್ಕಳ ವರದಿ
ಕಾರ್ಕಳದಲ್ಲಿನ ಪುರಾತನ, ವಿಶ್ವ ವಿಖ್ಯಾತ ಧಾರ್ಮಿಕ ಕೇಂದ್ರಗಳ ಆವರಣದಲ್ಲಿ ಪ್ರಿ-ವೆಡ್ಡಿಂಗ್ ಫೋಟೋ ಶೂಟ್, ಪ್ರೇಮಿಗಳ ಸುತ್ತಾಟ ನಡೆಯುತ್ತಿರುವ ಕುರಿತು ನ್ಯೂಸ್ ಕಾರ್ಕಳ ನ. 1ರಂದು ವರದಿ ಪ್ರಕಟಿಸಿತ್ತು. ಇದೀಗ ಜೈನ ಬ್ರಿಗೇಡ್ ತಂಡ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಧಾರ್ಮಿಕ ಕೇಂದ್ರದ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಿದೆ.

































