ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದು ನವಂಬರ್ 10ರಂದು ಮತ ಎಣಿಕೆಗೆ ದಿನ ನಿಗದಿ ಆಗಿದೆ. ಸರಕಾರದ ಮೇಲೆ ಯಾವುದೇ ಪರಿಣಾಮ ಇಲ್ಲದಿದ್ದರೂ ಕುತೂಹಲ ಖಂಡಿತವಾಗಿ ಇದೆ. ವಿಶೇಷವಾಗಿ ಆರ್. ಆರ್. ನಗರದ ಫಲಿತಾಂಶದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತೀವ್ರ ಕುತೂಹಲ ಇದೆ. ಎರಡು ಕ್ಷೇತ್ರಗಳು ಕೂಡ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳು. ಆರ್.ಆರ್. ನಗರ ಮುನಿರತ್ನ ಅವರಿಗೆ ಪ್ರತಿಷ್ಠೆ ಆಗಿದೆ. ರಾಜೀನಾಮೆ ನೀಡಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿರುವ ಅವರಿಗೆ ರಾಜಕೀಯ ನೆಲೆ ಗಟ್ಟಿ ಮಾಡಲು ಗೆಲುವು ಅನಿವಾರ್ಯ. ಮುನಿರತ್ನ ಗೆದ್ದರೆ ಮಂತ್ರಿ ಆಗ್ತಾರೆ, ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ಬಿಜೆಪಿ ಪ್ರಚಾರ ಮಾಡಿದೆ. ಹಿಂದಿನ ಹಲವು ಉಪ ಚುನಾವಣೆಗಳಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿ ಈ ಕ್ಷೇತ್ರದ ಮೇಲೆ ಭಾರೀ ಭರವಸೆ ಹೊಂದಿದೆ. ಆದರೆ ಡಿಕೆಶಿ ಕಾಂಗ್ರೆಸ್ ಅಧ್ಯಕ್ಷ ಆದ ನಂತರ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕುಸುಮ ಹೋದಲ್ಲೆಲ್ಲ ಅನುಕಂಪದ ಅಲೆಯನ್ನು ಹರಡಿದ್ದಾರೆ. ಅವರ ರಾಜಕೀಯ ಪ್ರಬುದ್ಧತೆಯ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ಪಕ್ಷ ಇಲ್ಲಿ ಯಾವ ಹೋರಾಟದ ಕುರುಹು ಕೂಡಾ ತೋರಿಸಿಲ್ಲ.ಮತದಾನದ ಪ್ರಮಾಣ ಕುಸಿದಿರುವ ಕಾರಣ ಎರಡು ಪಕ್ಷಗಳು ಕೂಡ ಆತಂಕದಲ್ಲಿ ಇವೆ. ಯಾರೇ ಗೆದ್ದರೂ 5-10 ಸಾವಿರ ಅಂತರ ಎನ್ನುವುದನ್ನು ಎರಡು ಪಕ್ಷಗಳು ಒಪ್ಪಿಕೊಂಡಿವೆ. ಫೋಟೋ ಫಿನಿಶ್ ಫಲಿತಾಂಶ ಅನ್ನುವುದು ಸದ್ಯದ ನಿರೀಕ್ಷೆ.
ಶಿರಾದಲ್ಲಿ ಭಾರೀ ಮತದಾನ ಆಗಿದೆ. ಅದು ಜೆಡಿಎಸ್ ಕ್ಷೇತ್ರ. ಸಹಜವಾಗಿ ಅನುಕಂಪದ ಅಲೆಯ ಲಾಭವನ್ನು ಪಡೆಯಲು ಜೆಡಿಎಸ್ ಮಲ್ಲಾಜಮ್ಮ ಸತ್ಯನಾರಾಯಣ ಅವರನ್ನು ಸ್ಪರ್ಧೆಗೆ ನಿಲ್ಲಿಸಿದೆ. ಆದರೆ ಕೊನೆಯ ಕ್ಷಣದಲ್ಲಿ ಆಗಿರುವ ಬದಲಾವಣೆಗಳು ಅನುಕಂಪಕ್ಕೆ ಹೊರತಾದ ಫಲಿತಾಂಶವನ್ನು ನೀಡಲಿವೆ ಎನ್ನುವುದು ರಾಜಕೀಯ ಪರಿಣಿತರ ಅನಿಸಿಕೆ. ಮುಖ್ಯಮಂತ್ರಿ ತಮ್ಮ ಮಗನನ್ನು ಶಿರಾದಲ್ಲಿ ಕಳುಹಿಸಿ ಬಿಸಿ ಮುಟ್ಟಿಸಿದ್ದಾರೆ. ಕಾಂಗ್ರೆಸಿನ ವರಿಷ್ಠ ನಾಯಕರಾದ ಡಿಕೆಶಿ ಮತ್ತು ಸಿದ್ಧರಾಮಯ್ಯ ಸಾಕಷ್ಟು ಬೆವರು ಹರಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಬಲಿಷ್ಟ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದರಿಂದ ಅಭ್ಯರ್ಥಿಗಳ ತಾಕತ್ತು ಕೂಡ ಇಲ್ಲಿ ನಿರ್ಣಾಯಕ ಆಗಿದೆ. ಪಕ್ಷದ ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದರಿಂದ ಬಿಜೆಪಿ ಪಕ್ಷದಲ್ಲಿ ಒಂದಿಷ್ಟು ಬಂಡಾಯದ ಹೊಗೆ ಕೆಲಸ ಮಾಡಿದೆ. ಆದರೆ ನಾವು ಖಂಡಿತವಾಗಿ ಗೆಲ್ಲುತ್ತೇವೆ ಎಂದು ಎರಡು ಪಕ್ಷಗಳ ನಾಯಕರೂ ವಿಶ್ವಾಸದಿಂದ ಇದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಇಲ್ಲಿ ಒಕ್ಕಲಿಗ ದಾಳವನ್ನು ಉರುಳಿಸಿ ಗೆಲ್ಲುವ ಮಾತನ್ನು ಆಡುತ್ತಿದ್ದಾರೆ. ಭಾರೀ ಮತದಾನ ಆಗಿರುವುದರಿಂದ ಅದು ತಮ್ಮ ಪರ ಎಂದು ಬಿಜೆಪಿ ಹೇಳುತ್ತಿದೆ. ಅಂತಿಮವಾಗಿ ಗೆಲ್ಲೋದು ಯಾರು? ಎಂದು ತಿಳಿಯಲು ನವಂಬರ್ 10ರ ವರೆಗೆ ಕಾಯಲೇ ಬೇಕು.
ಆರ್.ಆರ್. ನಗರ – ಶಿರಾ ಗೆಲ್ಲೋದು ಯಾರು?































