Homeಅಂಕಣರಾಜʼಪಥ (ರಾಜೇಂದ್ರ ಭಟ್‌ ಬರಹ)ಇಂದಿನ ಐಕಾನ್ - ಭಕ್ತಿ ಸಂಗೀತದ ಮೇರು ಪ್ರತಿಭೆ ಯೋಗೀಶ್ ಕಿಣಿ ಕಾರ್ಕಳ

Related Posts

ಇಂದಿನ ಐಕಾನ್ – ಭಕ್ತಿ ಸಂಗೀತದ ಮೇರು ಪ್ರತಿಭೆ ಯೋಗೀಶ್ ಕಿಣಿ ಕಾರ್ಕಳ


ನನ್ನ ಕಾರ್ಕಳವು ಸಂಗೀತದ ಅತ್ಯುನ್ನತ ಪರಂಪರೆಯನ್ನು ಹೊಂದಿದೆ. ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ವಿದ್ವಾಂಸ ಆಗಿದ್ದ ಬಿಡಾರಂ ಕೃಷ್ಣಪ್ಪ, ಹಿಂದುಸ್ಥಾನಿ ಸಂಗೀತದ ಶ್ರೇಷ್ಠ ರಾಯಭಾರಿ ಯೋಗೀಶ್ ಬಾಳಿಗಾ, ಶಾಸ್ತ್ರೀಯ ಸಂಗೀತದ ಗುರು ವ್ಯಾಸಕೃಷ್ಣ ಉಪಾಧ್ಯಾಯ, ಈಗ ಸಂಗೀತ ಕ್ಷೇತ್ರದಲ್ಲಿ ಬೆಳಗುತ್ತಿರುವ ಮಹಾಲಕ್ಷ್ಮಿ ಶೆಣೈ ಇವರೆಲ್ಲರೂ ಕಾರ್ಕಳದವರು. ಕಾರ್ಕಳದ ಹೆಮ್ಮೆಯ ಶಾಸ್ತ್ರೀಯ ಸಂಗೀತ ಸಭಾ ಎಂಬ ಸಂಸ್ಥೆಯು ಶುದ್ಧ ಸಂಗೀತದ ಶ್ರೇಷ್ಠತೆಯನ್ನು ನಾಡಿನಾದ್ಯಂತ ಪಸರಿಸುತ್ತಿದೆ. ಇಂತಹ ಕಾರ್ಕಳದಲ್ಲಿ ಕಳೆದ ಎರಡು ದಶಕಗಳಿಂದ ಒಂದು ಹೆಸರು ಸುಗಮ ಸಂಗೀತ, ಭಕ್ತಿ ಸಂಗೀತದಲ್ಲಿ ದೊಡ್ಡದಾಗಿ ಕೇಳಿ ಬರುತ್ತಿದೆ. ಅವರೇ ಯೋಗೀಶ್ ಕಿಣಿ, ನನ್ನೂರಿನ ಸಂಗೀತದ ನೂತನ ರಾಯಭಾರಿ!
ಅವರ ತಂದೆ ರಾಧಾಕೃಷ್ಣ ಕಿಣಿ ಅವರು ಕುಕ್ಕುಂದೂರು ದುರ್ಗಾ ಶಾಲೆಯಲ್ಲಿ ಶಿಕ್ಷಕರು ಮತ್ತು ಸಂಗೀತ ಕಲಾವಿದರು. ತಾಯಿ ಸುಮತಿ ಗೃಹಿಣಿ. ಮನೆಯಲ್ಲಿ ದಿನವೂ ಭಜನೆ ಹಾಡದ ದಿನವೆ ಇಲ್ಲ. ಅದರಿಂದಾಗಿ ಬಾಲ್ಯದಿಂದಲೂ ಯೋಗೀಶ ಕಿಣಿ ಅವರ ಮೇಲೆ ಸಂಗೀತದ ದಟ್ಟ ಪ್ರಭಾವ. ನಾಲ್ಕನೆಯ ವರ್ಷದಲ್ಲಿ ಅವರು ಹಾಡಲು ಆರಂಭ ಮಾಡಿದರು! ಒಂಬತ್ತನೆಯ ವರ್ಷಕ್ಕೆ ಭಜನಾ ಮಂಡಳಿ ಪ್ರವೇಶ. ಕಾರ್ಕಳದ ಭಜನಾ ಪರಂಪರೆಯು ಅದ್ಭುತವಾದದ್ದು. ಪಡುತಿರುಪತಿ ಎಂದೇ ಕೀರ್ತಿ ಪಡೆದ ಕಾರ್ಕಳದ ಶ್ರೀ ವೆಂಕಟರಮಣ ದೇವಳದಲ್ಲಿ ಪ್ರತೀ ನಿತ್ಯ ಸಂಜೆ ಭಜನೆ ನಡೆಸುವವರು ಶ್ರೀ ವೆಂಕಟರಮಣ ಭಜನಾ ಮಂಡಳಿಯವರು. ಅದರ ನೇತೃತ್ವ ವಹಿಸಿದ್ದ ಬೋಳ ಚಂದ್ರಶೇಖರ್ ಕಾಮತ್ ಅವರು (ಚಂದ್ ಮಾಮ್) ಯಾವಾಗಲೂ ಪ್ರತಿಭೆಯ ಶೋಧನೆಯಲ್ಲಿ ಆಸಕ್ತರು. ಎಳೆಯರಿಗೆ ವೇದಿಕೆಗಳನ್ನು ಕಲ್ಪಿಸಿಕೊಟ್ಟು ಹಾಡಿಸುವವರು. ಹಾಗೆ ಯೋಗೀಶ್ ಕಿಣಿ ಎಂಬ ಅನರ್ಘ್ಯ ರತ್ನವನ್ನು ಒರೆಗೆ ಹಚ್ಚಿ ಬೆಳಕಿಗೆ ತಂದ ಕೀರ್ತಿ “ಚಂದ್ ಮಾಮ್” ಅವರಿಗೆ ಸಲ್ಲಬೇಕು.
ಈ ಮಧ್ಯೆ ವಿದ್ವಾನ್ ವ್ಯಾಸ ಕೃಷ್ಣ ಉಪಾಧ್ಯಾಯ ಅವರಿಂದ ಆರಂಭಿಕ ಸಂಗೀತ ಶಿಕ್ಷಣವು ದೊರೆಯಿತು ( ಕರ್ನಾಟಕ). ಮುಂದೆ ಸಂಗೀತ ಗುರು ಯೋಗೀಶ್ ಬಾಳಿಗಾ ಅವರು ಹಿಂದೂಸ್ಥಾನಿ ಸಂಗೀತದ ಪರಂಪರೆಯನ್ನು ಯೋಗಿಶರಿಗೆ ಧಾರೆ ಎರೆದರು. ಮಹಾಗುರು ವಿದ್ವಾನ್ ಉಡುಪಿ ಮಾಧವ ಭಟ್ ಅವರ ಸ್ಪರ್ಶ ಮತ್ತು ಪ್ರಭಾವಗಳು ಯೋಗೀಶ್ ಕಿಣಿ ಅವರನ್ನು ಹಿಂದುಸ್ಥಾನಿ ಸಂಗೀತದ ವಿದ್ವತ್ ಪರೀಕ್ಷೆಯ ವರೆಗೆ ಕರೆದೊಯ್ದವು. ಆ ಪರೀಕ್ಷೆಯಲ್ಲೂ ಅವರು ಮೊದಲ ಶ್ರೇಣಿಯಲ್ಲಿ ತೇರ್ಗಡೆ ಆದರು. ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರೂ ಯೋಗೀಶ್ ಕಿಣಿ ಅವರು ಆರಿಸಿಕೊಂಡದ್ದು ಸುಗಮ ಸಂಗೀತ ಮತ್ತು ಭಕ್ತಿ ಸಂಗೀತವನ್ನು! ಅದು ಕಾರ್ಕಳದ ಭಕ್ತಿ ಸಂಗೀತ ಕ್ಷೇತ್ರದ ಭಾಗ್ಯ ಎಂದು ನನ್ನ ಅನಿಸಿಕೆ.
ಅವರು ತನ್ನ ತಂದೆಯಂತೆ ಶಿಕ್ಷಕರಾದರು. ಸದ್ಭಾವನಾ ನಗರ, ದುರ್ಗಾ, ಪಲಾಯಿ ಬಾಕ್ಯಾರ್ ಮತ್ತು ನಕ್ರೆ ಪಡ್ಯ ಇವುಗಳು ಅವರು ಸೇವೆ ಸಲ್ಲಿಸಿದ ಶಾಲೆಗಳು. ಐದು ವರ್ಷಗಳ ಕಾಲ CRP ಆಗಿ ಕೂಡ ಅವರು ಸೇವೆ ಸಲ್ಲಿಸಿದ್ದಾರೆ. ಹಾಡುಗಳ ಮೂಲಕ ಪಾಠ ಮಾಡುವ ಅವರು ವಿದ್ಯಾರ್ಥಿಗಳ ಮನ ಗೆದ್ದ ಶಿಕ್ಷಕ. ಶಿಕ್ಷಕರಾಗಿ ಅವರು 22 ವರ್ಷಗಳನ್ನು ಪೂರ್ತಿ ಮಾಡಿದ್ದಾರೆ.
ಕಳೆದ ಎರಡೂವರೆ ದಶಕಗಳಿಂದ ಅವರು ಶ್ರೀ ವೆಂಕಟರಮಣ ಭಜನಾ ಮಂಡಳಿಯ ಪ್ರಮುಖ ಗಾಯಕ. ಬಹಳ ಎತ್ತರದ ಸ್ಥಾಯಿಯಲ್ಲಿ ಸುಲಲಿತವಾಗಿ ಹಾಡುವ ಅವರ ಧ್ವನಿಯಲ್ಲಿ ಅದ್ಭುತವಾದ ವೈಬ್ರೇಶನ್ ಇದೆ ಎಂದು ನನಗೆ ಅರಿವಾಗಿದೆ. ಸಾವಿರಾರು ಭಜನೆ, ದಾಸರ ಪದಗಳು, ಮರಾಠಿ ಅಭಂಗಗಳು ಅವರಿಗೆ ಕಂಠಸ್ಥ. ಭಾವಗೀತೆ, ಹಳೆಯ ಕನ್ನಡ ಸಿನೆಮಾ ಗೀತೆಗಳು ಅವರ ಸಂಗ್ರಹದಲ್ಲಿ ಇವೆ. ವಿಶೇಷವಾಗಿ ಭಕ್ತಿ ಸಂಗೀತ ಹಾಡುವಾಗ ಅವರು ಮೈ ಮರೆಯುತ್ತಾರೆ.

‘ಕುಣಿದಾಡೋ ಕೃಷ್ಣ’ ಎಂದು ಅವರು ಹಾಡುವಾಗ ದೇವರು ಗೆಜ್ಜೆ ಕಟ್ಟಿ ಕುಣಿಯುವ ಫೀಲ್ ಉಂಟಾಗುತ್ತದೆ. ಧ್ವನಿಯು ಪ್ರೇಕ್ಷಕರನ್ನು ಅಧ್ಯಾತ್ಮದ ತುತ್ತ ತುದಿಗೆ ಕರೆದುಕೊಂಡು ಹೋಗುತ್ತದೆ.
ಪವಡಿಸು ಪರಮಾತ್ಮ, ಇಂದು ಎನಗೆ ಗೋವಿಂದ, ತಪ್ಪು ನೋಡದೆ ಬಂದೆಯ, ಶ್ರೀನಿವಾಸ ನೀನೇ ಪಾಲಿಸೋ, ಭಾಗ್ಯದ ಲಕ್ಷ್ಮಿ ಬಾರಮ್ಮ, ಶ್ರೀಗಂಧ ನಾನಾಗಿ, ಪವಮಾನ, ತಿರುಪತಿ ಗಿರಿವಾಸ, ಏನು ಧನ್ಯಳೋ ಲಕುಮಿ, ಮನೆಯೊಳಗಾಡೋ ಗೋವಿಂದ…ಹೀಗೆ ನೂರಾರು ಹಾಡುಗಳು ಅವರ ಸಿರಿ ಕಂಠದಿಂದ ಹೊಸದಾಗಿ ಆವಿರ್ಭಾವ ಆಗುತ್ತವೆ. ಈಗಾಗಲೇ ಜನಪ್ರಿಯವಾಗಿರುವ ಕೀರ್ತನೆಗಳನ್ನು ಕೂಡ ಹೊಸತಾಗಿ ಅವರು ನಿರೂಪಣೆ ಮಾಡುತ್ತಾರೆ. ಸಾಹಿತ್ಯ, ರಾಗ, ಆಲಾಪ್, ತಾಲ್ ಯಾವುದಕ್ಕೂ ಒಂದಿಷ್ಟು ಲೋಪ ಆಗದ ಹಾಗೆ ಅವರು ಹಾಡುತ್ತಾರೆ. ಮೂರು ಸ್ಥಾಯಿಗಳಲ್ಲಿ ಸುಲಲಿತವಾಗಿ ಸಂಚರಿಸುವ ಅವರ ದೈವದತ್ತವಾದ ಕಂಠವು ಕೇಳುಗರನ್ನು ಸಮ್ಮೋಹಿನಿ ಮಾಡುತ್ತದೆ. ಸಾವಿರಕ್ಕೂ ಹೆಚ್ಚು ಭಜನೆ ಮತ್ತು ಅಭಂಗಗಳು ಅವರಿಗೆ ಪೂರ್ತಿ ಕಂಠಸ್ಥ ಆಗಿವೆ. ಪುಸ್ತಕ ನೋಡಿ ಹಾಡುವುದಿಲ್ಲ ಎಂದು ಅವರ ಸಂಕಲ್ಪ. ಭಾವಗೀತೆಗಳನ್ನು ಹಾಡುವಾಗ ಕೂಡ ಅದೇ ತಾದಾತ್ಮ್ಯ ಅವರದ್ದು. ಯೋಗೀಶ್ ಕಿಣಿ ಯಾವುದೇ ಪದ್ಯವನ್ನು ಹಾಡಿದರೆ ಅದನ್ನು ಕೇಳುಗರ ಕಿವಿ, ಹೃದಯ ಮತ್ತು ಭಾವಕೋಶದಲ್ಲಿ ರಿಜಿಸ್ಟರ್ ಮಾಡಿಬಿಡುತ್ತಾರೆ! ಅವರೊಬ್ಬ ಭಕ್ತಿ ಸಂಗೀತಕ್ಕೆ ಸಮರ್ಪಿತವಾದ ಗಾಯಕ.
ಭಕ್ತಿ ಸಂಗೀತದ ಹಿರಿತನವನ್ನು ಜನಪ್ರಿಯ ಮಾಡುವ ಉದ್ದೇಶದಿಂದ ಕಾರ್ಕಳ, ಕಟಪಾಡಿ, ಮೂಡುಬಿದ್ರೆ, ಶಿರ್ವ, ಸಾಣೂರು, ಬೆಳ್ಮಣ್ ಉದ್ಯಾವರ ಮೊದಲಾದ ಕಡೆ ಅವರು ನಡೆಸಿ ಕೊಡುವ ಭಜನಾ ತರಗತಿಗಳು ತುಂಬಾ ಜನಪ್ರಿಯ. ಭಜನೆಯ ಆನ್ಲೈನ್ ಕ್ಲಾಸ್ ಕೂಡ ಅವರು ನಡೆಸಿ ಕೊಡುತ್ತಾರೆ. ಪ್ರತಿಫಲದ ಅಪೇಕ್ಷೆ ಮಾಡದೆ ನೂರಾರು ಗೃಹಿಣಿಯರಿಗೆ, ಯುವಕರಿಗೆ, ವಿದ್ಯಾರ್ಥಿಗಳಿಗೆ ಅವರು ಭಜನಾ ತರಬೇತಿಯನ್ನು ನೀಡುತ್ತಿದ್ದಾರೆ. ಅವರ ಎಲ್ಲಾ ವಿದ್ಯಾರ್ಥಿಗಳು ಯೋಗೀಶ್ ಕಿಣಿ ಅವರನ್ನು ತುಂಬಾ ಗೌರವಿಸುವುದನ್ನು ನಾನು ಗಮನಿಸಿದ್ದೇನೆ.
ನಮ್ಮ ಕರಾವಳಿಯ ಪ್ರತಿ ಒಂದು ಸಣ್ಣ ಊರಲ್ಲಿ ಕೂಡ ಭಜನಾ ಮಂಡಳಿಗಳು, ಮಂದಿರಗಳು ಇವೆ. ಪ್ರತಿ ವರ್ಷಕ್ಕೊಮ್ಮೆ ಭಜನಾ ಮಂಗಲ ಆಚರಿಸಿ ಆಹೋರಾತ್ರಿ ಭಜನಾ ಕಾರ್ಯಕ್ರಮವು ಎಲ್ಲಾ ಕಡೆ ನಡೆಯುತ್ತವೆ. ಬೇರೆ ಬೇರೆ ಊರಿನ ಮಂಡಳಿಗಳನ್ನು ಆಮಂತ್ರಿಸಿ ಭಜನಾ ಸೇವೆ ನಡೆಸುತ್ತಾರೆ. ಕಾರ್ಕಳದ ಶ್ರೀ ವೆಂಕಟರಮಣ ಭಜನಾ ಮಂಡಳಿ ಇಂದು ಜನಪ್ರಿಯತೆಯಲ್ಲಿ ಉತ್ತುಂಗದ ಸ್ಥಾನ ಪಡೆದಿದೆ. ಅವರ ಭಜನೆ ಕೇಳಲು ಜನರು ಮಧ್ಯರಾತ್ರಿ ಆದರೂ ಕಾಯಲು ಸಿದ್ಧರಾಗಿದ್ದಾರೆ. ಈ ಜನಪ್ರಿಯತೆಗೆ ಕಾರಣ ಯೋಗೀಶ್ ಕಿಣಿ ಅವರಂಥ ಶ್ರೇಷ್ಠ ಗಾಯಕರು ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಜನಪ್ರಿಯತೆಯ ಶಿಖರಕ್ಕೆ ಏರಿದ್ದರು ಕೂಡ ಯೋಗೀಶ್ ಕಿಣಿ ಅವರು ವಿನಯ ಸಂಪನ್ನರು. ತಮ್ಮ ತಂದೆ, ತಾಯಿ, ಗುರುಗಳ ಬಗ್ಗೆ ಮತ್ತು ಚಂದ್ರಶೇಖರ್ ಕಾಮತ್ ಅವರ ಬಗ್ಗೆ ಅವರಿಗೆ ಅತೀವವಾದ ಪ್ರೀತಿ ಮತ್ತು ಗೌರವ ಇದೆ. ದೇವರ ದಯೆಯಿಂದ ಈ ಸಾಧನೆ ಸಾಧ್ಯವಾಯಿತು ಎಂದವರು ನುಡಿಯುತ್ತಾರೆ. ಹಾಗೆಯೇ ಕಾರ್ಕಳದ ಜನರ ಪ್ರೀತಿಯನ್ನು ಇಷ್ಟೊಂದು ಗಳಿಸಿದ ಇನ್ನೊಬ್ಬ ಗಾಯಕ ದೊರೆಯುವುದು ಕಷ್ಟ. 2007ರ ಇಸವಿ ನವೆಂಬರ್ 19ರಂದು ಯೋಗೀಶ್ ಕಿಣಿ ಅವರು ವಿಶಿಷ್ಟ ಸಾಧನೆ ದಾಖಲು ಮಾಡಿದರು. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ನಿರಂತರವಾಗಿ 12 ಘಂಟೆ ಕಾರ್ಕಳ ವೆಂಕಟರಮಣ ದೇವರ ಸನ್ನಿಧಿಯಲ್ಲಿ ಮೈಮರೆತು ಹಾಡಿದರು. ತಾಳವನ್ನು ಕೆಳಗೆ ಇಡದೆ ಅಂದು ಅವರು ಹಾಡಿದ ಹಾಡುಗಳ ಸಂಖ್ಯೆ 126! ಅದು ದಾಖಲೆಗಾಗಿ ಅಲ್ಲ ಎಂದು ಅವರೇ ಹೇಳುತ್ತಾರೆ. ಭಕ್ತಿ ಸಂಗೀತವನ್ನು ಜನಪ್ರಿಯ ಮಾಡಲು ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನೂ ಅವರು ಮಾಡುತ್ತಿದ್ದಾರೆ. ರೇಡಿಯೋ, ಟಿವಿಗಳಲ್ಲಿ ನಿರಂತರ ಕಾರ್ಯಕ್ರಮ ನೀಡಿದ್ದಾರೆ. ಮುಂಬೈ, ದೆಹಲಿ, ಕೇರಳ, ಬೆಂಗಳೂರು, ಹೃಷಿಕೇಶ, ಬನಾರಸ್, ತಿರುಪತಿ, ಹೈದರಾಬಾದ್, ಹರಿದ್ವಾರ, ಗೋವಾ ಮೊದಲಾದ ಕಡೆ ಅವರ ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆದಿವೆ. ಎಲ್ಲಾ ಕಡೆ ಅವರಿಗೆ ಸಾವಿರಾರು ಅಭಿಮಾನಿಗಳು ಇದ್ದಾರೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ನಡೆಯುವ ಶಿಕ್ಷಕರ ಪ್ರತಿಭಾ ಸ್ಪರ್ಧೆಯಲ್ಲಿ ಎರಡು ಬಾರಿ ಸಂಗೀತ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಥಮ ಸ್ಥಾನ ಅವರು ಪಡೆದಿದ್ದಾರೆ. ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಎರಡು ವರ್ಷ ಪ್ರಥಮ, ಒಂದು ಬಾರಿ ದ್ವಿತೀಯ ಬಹುಮಾನ ಅವರು ಗೆದ್ದಿದ್ದಾರೆ. ನಾಡಗೀತೆ ಅವರು ಹಾಡುವಾಗ ಇಡೀ ಸಭಾಂಗಣವು ರಿಬೌಂಡ್ ಆಗುವುದನ್ನು ನಾನು ನೋಡಿದ್ದೇನೆ.
ಅವರ ಸಂಗೀತ ಸಾಧನೆಯ ಹಿಂದೆ ಅವರ ಧರ್ಮಪತ್ನಿ ಅರ್ಚನಾ ಕಿಣಿ, ಮಕ್ಕಳಾದ ನಿರ್ಮಿತಾ ಮತ್ತು ನಂದಿತಾ ಅವರ ಬೆಂಬಲ ಇದೆ. ಅರ್ಚನಾ ಹಾಡುತ್ತಾರೆ ಮತ್ತು ತಬಲಾ ನುಡಿಸುತ್ತಾರೆ. ನಿರ್ಮಿತಾ ಹಾರ್ಮೋನಿಯಂ ಬಾರಿಸುತ್ತಾರೆ ಮತ್ತು ಸುಶ್ರಾವ್ಯವಾಗಿ ಹಾಡುತ್ತಾರೆ. ನಂದಿತಾ ಕೂಡ ಹಾಡುಗಾರ್ತಿ. ಹೀಗೆ ಅವರ ಇಡೀ ಕುಟುಂಬವೇ ‘ ಸಂಗೀತ ಸಂಸಾರ ‘ ಆಗಿದೆ.
ಯೋಗೀಶ್ ಕಿಣಿ ಅವರು ಕಾರ್ಕಳದ ಕೀರ್ತಿಯನ್ನು ಭಕ್ತಿ ಸಂಗೀತ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ತಲುಪಿಸಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರಿಗೆ ಅವರು ನಂಬಿದ ಪಡುತಿರುಪತಿ ಶ್ರೀನಿವಾಸ ವೆಂಕಟರಮಣ ದೇವರ ಕೃಪೆ ಇರಲಿ.
ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here

Latest Posts

error: Content is protected !!