“ಮರಣಶಯ್ಯೆಯದೆಂದು ತಿಳಿದೊಡಂ ರೋಗಿಯನು|
ಹರಣಮಿರುವನ್ನೆಗಂ ಪರಿಚರಿಸುವಂತೆ||
ಸ್ಥಿರವಲ್ಲವೀಲೋಕವಾದೊಡಮದುಳ್ಳನಕ|
ಚರಿಸು ನೀನಾಳಾಗಿ-ಮಂಕುತಿಮ್ಮ”
ಕಾಯಿಲೆಯಿಂದ ಬಳಲುತ್ತಿರುವ ರೋಗಿಯು ಇನ್ನೇನು ಸಾಯುತ್ತಾನೆ ಎಂದು ತಿಳಿದಿದ್ದರೂ ವೈದ್ಯರು ಅವನು ಸಾಯುವವರೆಗೂ ಉಳಿಸುವ ತಮ್ಮ ಪ್ರಯತ್ನವನ್ನು ಮಾಡುತ್ತಾರೆ.ಅಂತೆಯೆ ಈ ಲೋಕ ಶಾಶ್ವತವಲ್ಲ ಎಂಬರಿವಿದ್ದರೂ ನಮ್ಮೊಳಗೆ ಪ್ರಾಣವಿರುವವರೆಗೆ ಒಬ್ಬ ಆಳಿನಂತೆ ಕೆಲಸ ಮಾಡುತ್ತಲೇ ಇರಬೇಕೆಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ನಮಗೆ ಆದೇಶ ಮಾಡಿದ್ದಾರೆ.

ಹುಟ್ಟಿದ ಪ್ರತಿಯೊಬ್ಬರು ಒಂದಲ್ಲ ಒಂದು ದಿನ ಸಾಯಲೇಬೇಕು.ಸತ್ತ ಮೇಲೆ ಪೂರ್ಣ ವಿಶ್ರಾಂತಿ. ಆದರೆ ಈ ದೇಹದಲ್ಲಿ ಪ್ರಾಣ ಇರುವವರಗೆ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಲೇಬೇಕು.ಸಾಯುವ ಸ್ಥಿತಿಯಲ್ಲಿಯೂ ರೋಗಿಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.ಜೀವ ಇರುವವರೆಗೆ ಬದುಕಿನ ಹೋರಾಟ ಮುಂದುವರಿಯಬೇಕು.ಮುಂಜಾನೆ ಅರಳಿದ ಹೂವು ಸಂಜೆ ಬಾಡುತ್ತದೆ,ಒಂದೇ ದಿನದಲ್ಲಿ ಬಾಳು ಮುಗಿದು ಹೋಗುವುದಾದರೂ ಹೂವು ದಿನವಿಡೀ ನಗುತ್ತಲೇ ಇರುತ್ತದೆ. ಇಂತಹ ಸಕಾರಾತ್ಮಕ ಮನೋಭಾವ ನಮ್ಮದಾಗಬೇಕು.
“ಕುಳಿತು ಪರದೆಯ ಹಿಂದೆ ಯಾರೊ
ಸ್ವಿಚ್ಚೊತ್ತುವರು,ಆಗ ದಿಗ್ಗನೆ ಬೆಳಕು
ಎಲ್ಲೆಂದೆರಲ್ಲಿ.ಮುಗಿಯಿತೆಂದರೆ ವೇಷ ಮತ್ತೆ
ಕತ್ತಲು ಅಲ್ಲಿ,ಬಾಳೊಂದು ನಾಟಕವೊ
ಮುದ್ದುರಾಮ”
ಎಂಬ ಕೆ.ಶಿವಪ್ಪನವರ ಮಾತಿನಂತೆ ನಾವೆಲ್ಲರೂ ಜಗದ ನಾಟಕದ ಪಾತ್ರಧಾರಿಗಳು. ನಮ್ಮ ನಮ್ಮ ಪಾತ್ರ ನಿರ್ವಹಣೆಯನ್ನು ನಿಷ್ಠೆಯಿಂದ ಮಾಡಿದಾಗ ನಾಟಕವೂ ಚೆನ್ನಾಗಿ ಮೂಡಿಬರುತ್ತದೆ.ಇದರಿಂದ ಪಾತ್ರಧಾರಿಯ ಸಾರ್ಥಕತೆಯೊಂದಿಗೆ ಸೂತ್ರಧಾರನಿಗೂ ಮೆಚ್ಚುಗೆಯಾಗುತ್ತದೆ. ಜಗತ್ತಿನಲ್ಲಿ ಯಾರೂ ಮತ್ತು ಯಾವುದೂ ಶಾಶ್ವತವಲ್ಲ.ಹಾಗಂತ ನಿರಾಶೆ ಹೊಂದಬೇಕಿಲ್ಲ.ನಾವು ಮಾಡುವ ಒಳ್ಳೆಯ ಕೆಲಸ ಶಾಶ್ವತವಾಗಿ ನಿಲ್ಲುತ್ತದೆ.ಒಬ್ಬ ಆಳು ಅಥವಾ ಸೇವಕ ಯಜಮಾನ ಒಪ್ಪಿಸಿದ ಕೆಲಸವನ್ನು ಆಸಕ್ತಿಯಿಂದ ಮಾಡಿ ಒಡೆಯನ ಮೆಚ್ಚುಗೆಗೆ ಪಾತ್ರನಾಗುವಂತೆ ಭಗವಂತನ ಸೇವಕರಾದ ನಾವು ಅವನು ವಹಿಸಿದ ಕಾರ್ಯವನ್ನು ಆಸಕ್ತಿಯಿಂದ ನಿರ್ವಹಿಸಿದಾಗ ಜೀವನ ಸಾರ್ಥಕವಾಗುತ್ತದೆ.
“ಇರುವುದೊಂದೇ ಬದುಕು.ಸಿಗುವುದು ಕೆಲವೇ ದಿನ.ತಿಳಿಯದೇ ಕಳೆವ ಬಾಲ್ಯ,ಗೊತ್ತಿಲ್ಲದೆ ಜಾರುವ ಹರೆಯ,ಕರೆಯದೆ ಬರುವ ಮುದಿತನ.ಈ ಎಲ್ಲವನ್ನು ಅನುಭವಿಸುತ್ತಾ ನಗುನಗುತ್ತಾ ಬಾಳುವುದೇ ಜೀವನ”
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರು
