ಮುಂಬಯಿ, ನ. 1 : ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆಯೇನೂ ಇದೆ ನಿಜ. ಹಾಗೆಂದು ಯಾವಾಗಲಾದರೊಂದು ದಿನ ರಟ್ಟಾಗುವ ಸುಳ್ಳನ್ನು ಹೇಳಿ ಮದುವೆಯಾದರೆ ಪೊಲೀಸರ ಅತಿಥಿಯಾಗಬೇಕಾಗುತ್ತದೆ ಎನ್ನುವುದಕ್ಕೆ ಮುಂಬಯಿಯ ಈ ಚಾರ್ಟರ್ಡ್ ಅಕೌಂಟಂಟ್ ಪ್ರಕರಣವೇ ಸಾಕ್ಷಿ.
ಮುಂಬಯಿಯ ಹೊರವಲಯದಲ್ಲಿರುವ ಮೀರಾರೋಡ್ ನಿವಾಸಿ ಈ ಚಾರ್ಟರ್ಡ್ ಅಕೌಂಟಂಟ್ ಕಳೆದ ಸೆಪ್ಟೆಂಬರ್ ನಲ್ಲಿ ಮದುವೆಯಾಗಿದ್ದ. ಆದರೆ ಅವನು ಮಾಡಿದ ಒಂದೇ ಒಂದು ತಪ್ಪು ಎಂದರೆ ತನ್ನ ತಲೆ ಬೋಳಾಗಿದೆ ಎಂಬ ವಿಷಯವನ್ನು ಮುಚ್ಚಿಟ್ಟದ್ದು. ಮದುವೆಯಾದ ಬಳಿಕ ಹೆಂಡತಿಗೆ ತನ್ನ ಗಂಡನ ತಲೆಯಲ್ಲಿ ಕೂದಲು ಇಲ್ಲ ಎಂಬ ವಿಚಾರ ತಿಳಿದು ಆಘಾತವಾಗಿದೆ.
ಮದುವೆಯ ಮೊದಲು ಸುಂದರವಾದ ವಿಗ್ ಧರಿಸಿ ಆತ ಚೆಲುವನಾಗಿ ಕಾಣಿಸಿಕೊಂಡಿದ್ದ. ಗಂಡನಾಗಲಿ, ಆತನ ಮನೆಯವರಾಗಲಿ ಗಂಡನ ತಲೆಯಲ್ಲಿ ಕೂದಲು ಇಲ್ಲ ಎಂಬ ವಿಚಾರವನ್ನು ತಿಳಿಸಿಲ್ಲ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಹೆಂಡತಿಯಿಂದ ಸಾಧ್ಯವಾಗಲಿಲ್ಲ. ತನಗೆ ಮೋಸ ಮಾಡಿದವರನ್ನು ಬಿಡಬಾರದು ಎಂದು ಆಕೆ ಮಂಗಳವಾರ ನಯಾನಗರ್ ಪೊಲೀಸ್ ಠಾಣೆಗೆ ಹೋಗಿ ಗಂಡ ಮತ್ತು ಮನೆಯವರ ವಿರುದ್ಧ ಸುಳ್ಳು ಹೇಳಿ ಮದುವೆಯಾದ ಕುರಿತು ದೂರು ನೀಡಿದ್ದಾಳೆ. ಗಂಡನ ತಲೆ ಬೋಳು ಮಾತ್ರವಲ್ಲ, ಅವನಿಗೆ ಸಂಶಯ ಸ್ವಭಾವವೂ ಇದೆ. ಆಗಾಗ ನನ್ನನ್ನು ಹಿಂಸಿಸುತ್ತಿದ್ದ ಎಂದು ಹೆಂಡತಿ ದೂರಿನಲ್ಲಿ ತಿಳಿಸಿದ್ದಾಳೆ. ಗಂಡನನ್ನು ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.
